‘ಚಹಾ ಕಪ್‌ನಲ್ಲಿ ಎದ್ದ ಬಿರುಗಾಳಿ’ ಬಗೆಹರಿದಿದೆ
ನ್ಯಾಯಾಧೀಶರ ಬಿಕ್ಕಟ್ಟಿನ ಬಗ್ಗೆ ಅಟಾರ್ನಿ ಜನರಲ್ ಪ್ರತಿಕ್ರಿಯೆ

ಹೊಸದಿಲ್ಲಿ, ಜ.15: ಭಾರತದ ಪ್ರಧಾನ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಾಧೀಶರ ನಡುವಿನ ‘ಬಿಕ್ಕಟ್ಟು’ ‘ಚಹಾಕಪ್‌ನಲ್ಲಿ ಎದ್ದ ಬಿರುಗಾಳಿಯಾಗಿದ್ದು’ ಇದನ್ನು ಮಾತುಕತೆಯ ಮೂಲಕ ಬಗೆಹರಿಸಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.
ಪ್ರತೀ ದಿನ ಸುಪ್ರೀಂಕೋರ್ಟ್‌ನ ಕಲಾಪಕ್ಕೆ ಹಾಜರಾಗುವ ಮೊದಲು ನ್ಯಾಯಾಧೀಶರು ಒಟ್ಟು ಸೇರುವ ಸಭಾಂಗಣದಲ್ಲಿ ಎಲ್ಲಾ ಸಿಬ್ಬಂದಿಗಳನ್ನೂ ಸೇರಿಸಿ ನಡೆಸಲಾದ ಮಾತುಕತೆಯಲ್ಲಿ ಐವರು ನ್ಯಾಯಮೂರ್ತಿಗಳೂ ಸೌಹಾರ್ದಪೂರ್ವಕವಾಗಿ ತಮ್ಮ ನಡುವಿನ ‘ಬಿಕ್ಕಟ್ಟ’ನ್ನು ಬಗೆಹರಿಸಿಕೊಂಡಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಅನಧಿಕೃತ ಮಾತುಕತೆ ನಡೆದ ಬಳಿಕ ಎಲ್ಲವೂ ಸರಿಹೋಗಿದೆ. ನ್ಯಾಯಾಲಯದ ಕಲಾಪ ಸುಗಮವಾಗಿ ಸಾಗಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ ಹೇಳಿಕೆ ನೀಡಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರ, ಸುಪ್ರೀಂಕೋರ್ಟ್‌ನ 15 ನ್ಯಾಯಾಧೀಶರನ್ನೂ ಭೇಟಿಯಾಗಿದ್ದು ಬಿಕ್ಕಟ್ಟು ಬಗೆಹರಿದಿದೆ ಎಂದು ಎಲ್ಲರೂ ಖಚಿತಪಡಿಸಿದ್ದಾರೆ ಎಂದು ತಿಳಿಸಿದರು.
ಬಳಿಕ ಸುಪ್ರೀಂಕೋರ್ಟ್‌ನ ಕಾರ್ಯಕಲಾಪ ಆರಂಭಗೊಂಡಾಗ ವಕೀಲ ಆರ್.ಪಿ.ಲೂಥ್ರ ಈ ವಿಷಯವನ್ನು ಪ್ರಸ್ತಾವಿಸಿದರು. ಸಂಸ್ಥೆಯನ್ನು ನಾಶಗೊಳಿಸಲು ನಡೆಸಿರುವ ಸಂಚು ಇದಾಗಿದ್ದು ಮುಖ್ಯ ನ್ಯಾಯಮೂರ್ತಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದವರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸದ ಮುಖ್ಯನ್ಯಾಯಮೂರ್ತಿ ಕಿರುನಗೆ ಬೀರಿದರು ಎಂದು ಮೂಲಗಳು ತಿಳಿಸಿವೆ.
ಮುಖ್ಯ ನ್ಯಾಯಮೂರ್ತಿಯೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದ ಬಳಿಕ ನಾಲ್ವರು ‘ಬಂಡಾಯ’ ನ್ಯಾಯಾಧೀಶರು ಎಂದಿನಂತೆ ಕಾರ್ಯಕಲಾಪದಲ್ಲಿ ಪಾಲ್ಗೊಂಡರು. ನ್ಯಾಯಮೂರ್ತಿ ಚಲಮೇಶ್ವರ್ ಅವರು ನಿರ್ವಹಿಸುವ 60 ಪ್ರಕರಣಗಳು ಇಂದಿನ ‘ಲಿಸ್ಟಿಂಗ್’ನಲ್ಲಿದ್ದವು.