ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿರುವ ಜೆಡಿಎಸ್: ಡಿ.ವಿ.ಸದಾನಂದಗೌಡ

ಸೋಮವಾರಪೇಟೆ,ಜ.15: ಜೆಡಿಎಸ್ ಪಕ್ಷಕ್ಕೆ ಇದು ಕೊನೆ ಚುನಾವಣೆಯಾಗಲಿದ್ದು, ಹತ್ತು ಸ್ಥಾನವನ್ನೂ ಕೂಡ ಪಡೆಯಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುವುದಾಗಿ ಕನಸು ಕಾಣುತ್ತಿದೆ. ಇದು ಸಾಧ್ಯವಿಲ್ಲದ ಮಾತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಸೋಮವಾರ ಪಟ್ಟಣದ ಜೇಸಿ ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ 150 ಸ್ಥಾನ ಪಡೆದು ಅಧಿಕಾರ ನಡೆಸುತ್ತದೆ. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ಮೂರುವರೆ ವರ್ಷಗಳಲ್ಲಿ ಬಡತನ ನಿರ್ಮೂಲನೆ, ಆರ್ಥಿಕ ಸಬಲೀಕರಣ, ನೋಟು ಅಮಾನೀಕರಣ ಹಾಗೂ ದೇಶಾದ್ಯಂತ ಏಕರೂಪ ತೆರಿಗೆ ಜಾರಿಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಇದರಿಂದಾಗಿ ದೇಶದ 29 ರಾಜ್ಯಗಳ ಪೈಕಿ 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುವಂತಾಗಿದೆ ಎಂದರು.
ಮುಂದಿನ ಹತ್ತು ದಿನಗಳಲ್ಲಿ ಸಮಸ್ಯೆ ಪರಿಹಾರ
ಮಡಿಕೇರಿ ಕ್ಷೇತ್ರದ ಬಿಜೆಪಿ ವಲಯದಲ್ಲಿ ಅಸಮದಾನ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಹತ್ತು ದಿನಗಳ ಒಳಗಾಗಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಪಕ್ಷದ ಮುಖಂಡರೊಡನೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‍ಷಾ ಅವರ ಆದೇಶದಂತೆ ಇತರ ಪಕ್ಷಗಳಿಂದ ವಲಸೆ ಬರುವ ಎಲ್ಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ. ಆದರೆ, ಚುನಾವಣೆಯ ನಂತರ ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ಸಂಸದ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯಕ್ಕೆ ಕಳೆದ ನಾಲ್ಕು ಮುಕ್ಕಾಲು ವರ್ಷಗಳಿಂದ ಗ್ರಹಣ ಹಿಡಿದಿದೆ. ಮುಂದಿನ ಮೂರು ತಿಂಗಳಲ್ಲಿ ಗ್ರಹಣ ಬಿಡಲಿದೆ. ಟಿಪ್ಪು ಜಯಂತಿಯನ್ನು ಆಚರಿಸಿದ ಸಿದ್ದರಾಮಯ್ಯ ಸರ್ಕಾರ ಹುಣಸೂರಿನಲ್ಲಿ ಹನುಮ ಜಯಂತಿಯನ್ನು ಆಚರಿಸಲು ತಡೆ ನೀಡಿತು. ಅಲ್ಲದೇ ಆಚರಿಸಲು ತೆರಳಿದ ನನ್ನನ್ನು 14 ಗಂಟೆಗಳ ಕಾಲ ಪೊಲೀಸರ ಸರ್ಪಗಾವಲಿನಲ್ಲಿ ತಿರುಗಾಡಿಸಿದರು. ಆದರೆ ಇದೇ ಜನವರಿ 27ರಂದು ಹುಣಸೂರಿನಲ್ಲಿ ಹನುಮ ಜಯಂತಿಯನ್ನು ಆಚರಿಸಲಾಗುವುದು. ಇದನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಮಾತನಾಡಿ, ಮಹಾಭಾರತದಲ್ಲಿ ಕೌರವರು ನಾಶವಾದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ನಾಶವಾಗಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. 1 ಲಕ್ಷದ 42ಸಾವಿರ ಕೋಟಿ ರೂ. ಸಾಲ ಮಾಡಿರುವುದೆ ಸಾಧನೆ. ಅತಿ ಹೆಚ್ಚು ಅಂದರೆ 3500 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ, ಕೋಮುಗಲಭೆ, ಅತ್ಯಾಚಾರದಲ್ಲಿ ರಾಜ್ಯ ಎರಡನೆ ಸ್ಥಾನದಲ್ಲಿದ್ದು ಇದನ್ನೇ ಸಾಧನಾ ಸಮಾವೇಶದಲ್ಲಿ ಹೇಳಬೇಕು. ಮುಂದಿನ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ನ್ನು ಅರಬ್ಬಿ ಸಮುದ್ರಕ್ಕೆ ಎಸೆಯಲಿದ್ದಾರೆ ಎಂದರು.
ಬಿಜೆಪಿ ಸೈದ್ಧಾಂತಿಕ ಹಿನ್ನೆಲೆಯುಳ್ಳ ರಾಷ್ಟ್ರೀಯ ಪಕ್ಷ. ಇಂತಹ ದೇಶಭಿಮಾನವುಳ್ಳ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಕರ್ತವ್ಯ ಎಂದು ಹೇಳಿದರು. ವಿಭಜನೆ ಮತ್ತು ವಿಷಯಾಂತರದ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ. ಮೊದಲು ಅಹಿಂದ ಎನ್ನುತ್ತಿದ್ದ ಮುಖ್ಯ ಮಂತ್ರಿಗಳು ದಿಡೀರನೆ ನಾನು ಹಿಂದು ಎನ್ನಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರಿಂದ ಪ್ರಾರಂಭಗೊಂಡು ಇಲ್ಲಿಯವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಕೇವಲ 1.15 ಲಕ್ಷ ಕೋಟಿ ರೂ ಸಾಲ ಮಾಡಿದ್ದರು. ಆದರೆ, ಸಿದ್ದರಾಮಯ್ಯರವರು ಒಂದೇ ಅವಧಿಯಲ್ಲಿ 1.42 ಲಕ್ಷ ಕೋಟಿ ರೂ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯನವರ ಸಾಧನೆಯನ್ನು ತಿಳಿಯಬೇಕಾದರೆ, ವಿಧಾನಪರಿಷತ್ ಸದಸ್ಯ ಗೋವಿಂದರಾಜ್‍ರವರ ಡೈರಿಯನ್ನು ನೋಡಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಾಳನ ರವಿ ವಹಿಸಿದ್ದರು. ವೇದಿಕೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ಜಿಲ್ಲಾ ಅಧ್ಯಕ್ಷ ಬಿ.ಬಿ.ಭಾರತೀಶ್, ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ, ಜಿಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಮಾಚಿಮಡ ಗಪ್ಪಣ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಮುಖರಾದ ವಿ.ಎಂ.ವಿಜಯ್, ಎಸ್.ಬಿ.ಭರತ್‍ಕುಮಾರ್, ಎನ್.ಆರ್.ಅಜೀಶ್‍ಕುಮಾರ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







