ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ
ಬೆಂಗಳೂರು, ಜ.15: ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ರಾಜ್ಯದ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ದಲಿತ ಸಂಘಟನೆಗಳ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಅವರು, ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕಣಕ್ಕೆ ಸರಕಾರ ಬದ್ಧ. ಆದರೆ, ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ಕೆಲ ಗೊಂದಲಗಳ ಹಿನ್ನೆಲೆಯಲ್ಲಿ ಅಡ್ವೋಕೇಟ್ ಜನರಲ್ ಅಭಿಪ್ರಾಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಪಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಲಮಿತಿಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಚರ್ಚಿಸಿ, ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಆದರೆ, ಇಷ್ಟೇ ದಿನದ ಒಳಗೆ ಜಾರಿಗೊಳಿಸುತ್ತೇವೆಂದು ಕಾಲಮಿತಿ ನಿಗದಿ ಸರಿಯಲ್ಲ. ಅದಷ್ಟು ಶೀಘ್ರದಲ್ಲೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆಂದು ಹೇಳಲಾಗಿದೆ.
ಪರಿಶಿಷ್ಟ ಜಾತಿಯಲ್ಲಿನ ಬಲಗೈ(ಹೊಲೆಯ), ಎಡಗೈ(ಮಾದಿಗ) ಸಮುದಾಯಗಳು ನ್ಯಾ.ಸದಾಶಿವ ಆಯೋಗದ ಶಿಫಾರಸ್ಸಿನ ಅನ್ವಯ ಅಥವಾ ಅದರ ಹೊರತಾಗಿಯೂ ಎರಡೂ ಸಮುದಾಯಗಳು ಪ್ರಸ್ತುತ ಇರುವ ಮೀಸಲಾತಿ ಪ್ರಮಾಣವನ್ನು ಸಮನಾಗಿ ಹಂಚಿಕೊಳ್ಳಲು ಸಿದ್ದ. ಹೀಗಾಗಿ ವರದಿ ಜಾರಿಗೆ ಸರಕಾರ ಕ್ರಮ ವಹಿಸಬೇಕೆಂಬ ಆಗ್ರಹವೂ ಕೇಳಿಬಂತ್ತು ಎಂದು ಗೊತ್ತಾಗಿದೆ.
ಸಭೆಯಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಮಾರಸಂದ್ರ ಮುನಿಯಪ್ಪ, ಎನ್.ಮೂರ್ತಿ, ಸಿ.ಎಂ.ಮುನಿಯಪ್ಪ, ಆರ್.ಮೋಹನ್ ರಾಜ್, ಲಕ್ಷ್ಮಿ ನಾರಾಯಣ ನಾಗವಾರ, ಎನ್.ವೆಂಕಟೇಶ್, ಶಂಕರಪ್ಪ, ಕೇಶವಮೂರ್ತಿ, ಪಾವಗಡ ಶ್ರೀರಾಮ್, ಡಿ.ಜಿ.ಸಾಗರ್, ರುದ್ರಸ್ವಾಮಿ, ಗುರುಪ್ರಸಾದ್ ಕೆರೆಗೊಡು, ಬಸವರಾಜ್ ಕವಿತಾಳ, ಸಮಾಜ ಕಲ್ಯಾಣ ಸಚಿವ ಆಂಜನೇಯ, ಆರ್.ಬಿ. ತಿಮ್ಮಾಪೂರ್, ಸಂಸದ ಚಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







