ರೈತರ ಕುಟುಂಬಕ್ಕೆ 25ಲಕ್ಷ ರೂ. ನೆರವು ನೀಡಿ: ವಾಟಾಳ್ ನಾಗರಾಜ್

ಬೆಂಗಳೂರು, ಡಿ. 15: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡುವ ಮೂಲಕ ರಾಜ್ಯ ಸರಕಾ ರೈತರ ನೆರವಿಗೆ ಮುಂದಾಗ ಬೇಕೆಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಎತ್ತಿನಗಾಡಿ ಮೆರವಣಿಗೆ ನಡೆಸಿ, ಸಾರ್ವಜನಿಕರಿಗೆ ಎಳ್ಳು ಬೆಲ್ಲ ವಿತರಿಸಿ ಅವರು ಮಾತನಾಡಿದರು. ನಾಡಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರಕಾರ ರೈತರ ನೆರವಿಗೆ ಮುಂದಾಗಬೇಕು. ಬೆಳೆ ಹಾನಿಯಿಂದಾಗಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ 25ಲಕ್ಷರೂ. ನೆರವು ನೀಡಬೇಕು. ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ನಮ್ಮ ರಾಜ್ಯದಲ್ಲೆ ನೀರಿಗೆ ಅಭಾವವಿದೆ ಇಂತಹ ಸಂದರ್ಭದಲ್ಲಿ ತಮಿಳುನಾಡು ಸರಕಾರ ಕಾವೇರಿ ನೀರಿಗಾಗಿ ಪತ್ರ ಬರೆದಿದೆ. ನಮ್ಮ ಸರಕಾರ ಕಾವೇರಿ ನೀರು ಬಿಟ್ಟರೆ ದಂಗೆ ಏಳಬೇಕಾಗುತ್ತದೆಂದು ಎಚ್ಚರಿಸಿದರು.
ಪ್ರತಿಭಟನೆ: ಮಹದಾಯಿ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಗೋವಾ ಸರಕಾರದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕನ್ನಡದವರು ಹರಾಮಿಗಳೆಂಬ ಉದ್ಧಟತನದ ಹೇಳಿಕೆ ನೀಡಿರುವುದು ಖಂಡನೀಯ. ಅವರ ವಿರುದ್ಧ ಜ.16 ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ವಾಟಾಳ್ ತಿಳಿಸಿದರು.







