ಡೀಸೆಲ್ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ : ಪೆಟ್ರೋಲ್ ಬೆಲೆ 3 ವರ್ಷಗಳಲ್ಲೆ ಗರಿಷ್ಠ ಏರಿಕೆ

ಹೊಸದಿಲ್ಲಿ, ಜ. 15: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ಗರಿಷ್ಠ ದಾಖಲೆ 61.74 ರೂ.ಗೆ ತಲುಪಿದೆ ಹಾಗೂ ಪೆಟ್ರೋಲ್ ಬೆಲೆ ಲೀಟರ್‌ಗೆ 71 ರೂ. ದಾಟಿದೆ.
ರಾಷ್ಟ್ರ ಸ್ವಾಮಿತ್ವದ ತೈಲ ಕಂಪೆನಿಗಳ ದಿನದ ತೈಲ ಬೆಲೆ ಪಟ್ಟಿಯ ಪ್ರಕಾರ ಸೋಮವಾರ ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 71.18ಕ್ಕೆ ಏರಿಕೆಯಾಗಿತ್ತು. ಇದು 2014 ಆಗಸ್ಟ್‌ನಿಂದ ಗರಿಷ್ಠ ಏರಿಕೆ.
ಹೊಸದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ಗರಿಷ್ಠ 61.74 ರೂ.ಗೆ ಏರಿಕೆಯಾಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ದರ ಗರಿಷ್ಠ ಇರುವ ಮುಂಬೈಯಲ್ಲಿ ಡೀಸೆಲ್ ಲೀಟರ್‌ಗೆ 65.74 ರೂ.ಗೆ ಮಾರಾಟವಾಗುತ್ತಿದೆ.
2017 ಡಿಸೆಂಬರ್ 12ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಅಂದು ದಿಲ್ಲಿಯಲ್ಲಿ ಡೀಸೆಲ್ ಬೆಲೆ 58.34 ಇತ್ತು. ಒಂದು ತಿಂಗಳಲ್ಲಿ ಡೀಸೆಲ್ ಬೆಲೆ 3.40 ರೂ. ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪೆಟ್ರೋಲ್ ಬೆಲೆ 2.09 ರೂ. ಏರಿಕೆಯಾಗಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.
ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 70.88 ರೂ.ಗೆ ಏರಿಕೆಯಾದಾಗ ಹಾಗೂ ಡೀಸೆಲ್ ಬೆಲೆ 59.14 ರೂ. ಇದ್ದಾಗ ಕೇಂದ್ರದಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ 2017 ಅಕ್ಟೋಬರ್‌ನಲ್ಲಿ ಒಂದು ಬಾರಿ ಎಕ್ಸೈಸ್ ಸುಂಕವನ್ನು ಲೀಟರ್‌ಗೆ 2 ರೂ. ಇಳಿಕೆ ಮಾಡಿತ್ತು.
ಈ ಎಕ್ಸೆಸ್ ಸುಂಕ ಕಡಿತಗೊಳಿಸಿದ್ದರಿಂದ 2017 ಅಕ್ಟೋಬರ್ 4ರಂದು ಡೀಸೆಲ್ ಬೆಲೆ 56.89 ರೂ., ಹಾಗೂ ಪೆಟ್ರೋಲ್ ಬೆಲೆ 63.38 ರೂ.ಗೆ ಇಳಿಕೆಯಾಗಿತ್ತು.