ಅಕ್ರಮ ಸಂಬಂಧ ಮುಚ್ಚಿಹಾಕಲು ‘ಲವ್‌ಜಿಹಾದ್’ನ ಕತೆಕಟ್ಟಿದ್ದ ಆರೋಪಿ ಶಂಭುಲಾಲ್
ರಾಜಸಮಂಡ್ ಜೀವಂತದಹನ ಪ್ರಕರಣ

ಜೈಪುರ,ಜ.15: ಪಶ್ಚಿಮಬಂಗಾಳದ ಮುಸ್ಲಿಂ ವ್ಯಕ್ತಿಯನ್ನು ಕೊಲೆಗೈದ ಆರೋಪದಲ್ಲಿ ಬಂಧಿತನಾಗಿರುವ ರಾಜಸ್ಥಾನದ ನಿವಾಸಿ ಶಂಭುಲಾಲ್ ರೆಗಾರ್ ತನ್ನ ‘ಹಿಂದೂ ಸಹೋದರಿ’ಯೆಂದು ಹೇಳಿಕೊಂಡ ಯುವತಿಯೊಂದಿಗೆ ತನಗಿರುವ ಅಕ್ರಮ ಸಂಬಂಧವನ್ನು ಮುಚ್ಚಿಹಾಕುವ ಉದ್ದೇಶದಿಂದ, ಈ ಕೊಲೆ ಪ್ರಕರಣಕ್ಕೆ ‘ಲವ್‌ಜಿಹಾದ್’ ಕತೆ ಕಟ್ಟಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.
36 ವರ್ಷ ವಯಸ್ಸಿನ ರೆಗಾರ್, ಕಳೆದ ವರ್ಷದ ಡಿಸೆಂಬರ್ 6ರಂದು ರಾಜಸಮಂಡ್ ಜಿಲ್ಲೆಯಲ್ಲಿ 50 ವರ್ಷ ವಯಸ್ಸಿನ ಅಫ್ರಾಝುಲ್ ಎಂಬವರನ್ನು ಮಾರಕಾಯುಧದಿಂದ ಕಡಿದು ಕೊಲೆಗೈದ ಬಳಿಕ ಜೀವಂತವಾಗಿ ಸುಟ್ಟುಹಾಕಿದ್ದ. ಆರೋಪಿಯು, ತನ್ನ ಸಂಬಂಧಿಕನಾದ 15 ವರ್ಷದ ಬಾಲಕನೊಬ್ಬನ ಮೂಲಕ ಈ ಬರ್ಬರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಆನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ. ರೆಗಾರ್, ಪ್ರಸಾರ ಮಾಡಿದ ವಿಡಿಯೊದಲ್ಲಿ ಆತ ‘ಲವ್‌ಜಿಹಾದ್’ನಿಂದ 20 ವರ್ಷ ವಯಸ್ಸಿನ ಹಿಂದೂ ಸಹೋದರಿಯನ್ನು ರಕ್ಷಿಸಲು ಅಫ್ರಾಝುಲ್‌ರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿದ್ದಾನೆ. ಅಫ್ರಾಝುಲ್ ಹತ್ಯೆಗೆ ಲವ್‌ಜಿಹಾದ್ ಜೊತೆ ಸಂಬಂಧ ಕಲ್ಪಿಸುವ ಮೂಲಕ ಮಹಿಳೆಯ ಜೊತೆಗಿನ ತನ್ನ ಅಕ್ರಮ ಸಂಬಂಧಗಳು ಬಯಲಾಗಲಾರದು ಎಂದು ರೆಗಾರ್ ಭಾವಿಸಿದ್ದನೆಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.
ಆರೋಪಿ ರೆಗಾರ್ ವಿರುದ್ಧ ಪೊಲೀಸರು ಕೊಲೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಕ್ರಿಮಿನಲ್ ಸಂಚು ಮತ್ತಿತರ ಆರೋಪಗಳನ್ನು ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಆಲಿಕೆಯು ಬುಧವಾರದಂದು ವಿಚಾರಣೆಗೆ ಬರಲಿದೆಯೆಂದು ರಾಜ್‌ಸಮಂಡ್‌ನ ಒಲೀಸ್ ಅಧೀಕ್ಷಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ತನ್ನ ಸಹೋದರಿಯೆಂದು ರೆಗಾರ್ ಹೇಳಿಕೊಂಡಿದ್ದ ಯುವತಿಯು ಅಫ್ರಾಝುಲ್‌ರ ಗ್ರಾಮದ ಕಾರ್ಮಿಕನೊಬ್ಬನ ಜೊತೆ ಪರಾರಿಯಾಗಿದ್ದಳು. ಆಕೆಯನ್ನು ಮರಳಿ ಕರೆತರಲು ರೆಗಾರ್ ಯತ್ನಿಸಿದ್ದ. ಆದರೆ ಆಕೆ ಅದಕ್ಕೆ ಒಪ್ಪಿರಲಿಲ್ಲ. ಆನಂತರ ಆಕೆ ತಾನಾಗಿಯೇ ಗ್ರಾಮಕ್ಕೆ ವಾಪಸಾಗಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮಬಂಗಾಳದಿಂದ ಬರುವ ವಲಸೆ ಬರುವ ಕಾರ್ಮಿಕರಿಗೆ ಉದ್ಯೋಗ ಹಾಗೂ ವಸತಿಯನ್ನು ಪಡೆಯಲು ಅಫ್ರಾಝುಲ್ ನೆರವಾಗುತ್ತಿದ್ದನೆಂಬ ಅಸಮಾಧಾನದಿಂದ ಆತನನ್ನು ರೆಗಾರ್ ಗುರಿಯಿರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.