ಟ್ರಂಪ್‌ರ ಶಾಂತಿ ಪ್ರಯತ್ನಗಳು ‘ಶತಮಾನದ ಹೊಡೆತ’: ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್

ರಮಲ್ಲಾ, ಜ. 15: ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಅಮೆರಿಕ ಅಂಗೀಕರಿಸಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯ ಪ್ರಯತ್ನಗಳು ‘ಶತಮಾನದ ಹೊಡೆತ’ವಾಗಿ ಪರಿಣಿಸಿದೆ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಬಣ್ಣಿಸಿದ್ದಾರೆ.
ಇಸ್ರೇಲ್ ತನ್ನ ಕೃತ್ಯಗಳ ಮೂಲಕ 1990ರ ದಶಕದ ಮಹತ್ವಪೂರ್ಣ ಓಸ್ಲೊ ಶಾಂತಿ ಒಪ್ಪಂದಗಳನ್ನೂ ಮುರಿದಿದೆ ಎಂಬುದಾಗಿಯೂ ಅಬ್ಬಾಸ್ ಆರೋಪಿಸಿದರು. ಅದೇ ವೇಳೆ, ವಿಶ್ವಸಂಸ್ಥೆ ಮತ್ತು ಇಸ್ರೇಲ್‌ಗೆ ಅಮೆರಿಕದ ರಾಯಭಾರಿಗಳಾಗಿರುವ ನಿಕ್ಕಿ ಹೇಲಿ ಮತ್ತು ಡೇವಿಡ್ ಫ್ರೈಡ್‌ಮನ್ ‘ಕಪ್ಪು ಚುಕ್ಕೆ’ಗಳಾಗಿದ್ದಾರೆ ಎಂದು ಬಣ್ಣಿಸಿದರು.
‘‘ಟ್ರಂಪ್ ನಿಲುವನ್ನು ನಾವು ತಿರಸ್ಕರಿಸಿದ್ದೇವೆ. ‘ನಿಮ್ಮ ಯೋಜನೆಯನ್ನು ನಾವು ಒಪ್ಪುವುದಿಲ್ಲ’ ಎಂದು ಹೇಳಿದ್ದೇವೆ’’ ಎಂದು ಅಬ್ಬಾಸ್ ಹೇಳಿದರು.
ಟ್ರಂಪ್‌ರ ಜೆರುಸಲೇಂ ಘೋಷಣೆಯನ್ನು ಹೇಗೆ ಎದುರಿಸುವುದು ಎಂಬ ಕುರಿತ ಫೆಲೆಸ್ತೀನ್ ನಾಯಕರ ಮಹತ್ವದ ಸಭೆಯ ಆರಂಭದಲ್ಲಿ ಅಬ್ಬಾಸ್ ಈ ಮಾತುಗಳನ್ನು ಹೇಳಿದರು.
‘‘ಶತಮಾನದ ಒಪ್ಪಂದ ಶತಮಾನದ ಹೊಡೆತವೂ ಆಗಿದೆ. ನಾವು ಅದನ್ನು ಒಪ್ಪುವುದಿಲ್ಲ’’ ಎಂದರು.
ಇಸ್ರೇಲ್-ಫೆಲೆಸ್ತೀನ್ ಶಾಂತಿಯನ್ನು ಸಾಧಿಸುವ ‘ಅಂತಿಮ ಒಪ್ಪಂದ’ವನ್ನು ತಲುಪುವ ಟ್ರಂಪ್‌ರ ಪ್ರತಿಜ್ಞೆಗೆ ಅಬ್ಬಾಸ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.







