ಮದ್ದೂರು: ಗೋವಾ ಸಚಿವರ ಹೇಳಿಕೆ ಖಂಡಿಸಿ ರಸ್ತೆ ತಡೆ

ಮದ್ದೂರು, ಜ.15: ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಗೋವಾ ನೀರಾವರಿ ಸಚಿವ ಪಾಳೇಕರ್ ಕ್ಷಮೆಯಾಚೆನೆಗೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಹೆದ್ದಾರಿ ತಡೆ ನಡೆಸಿದರು.
ಪಾಳೇಕರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಪಾಳೇಕರ್ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ತಾಕೀತು ಮಾಡಿದರು. ಇದರಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತ್ಯವಸ್ತ್ಯಗೊಂಡಿತ್ತು.
ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಗೋವಾ ರಾಜ್ಯದ ಮುಖ್ಯಮಂತ್ರಿ ಹಾಗು ನೀರಾವರಿ ಸಚಿವರು ಕರ್ನಾಟಕಕ್ಕೆ ನ್ಯಾಯ ಬದ್ದವಾಗಿ ಕುಡಿಯುವ ನೀರು ಕೊಡದೆ ಮೊಂಡುವಾದ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಹಾದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ರಾಜಕೀಯ ದುರುದ್ದೇಶದಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು. ಮತ್ತೊಮ್ಮೆ ರಾಜ್ಯದ ಬಗ್ಗೆ ಹಗುರವಾಗಿ ಮಾತನಾಡಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮಲ್ಲರಾಜು, ಗುಂಡ ಮಹೇಶ್, ಲಕ್ಷ್ಮಣ್‍ಗೌಡ, ರಮೇಶ್, ಶಿವಣ್ಣ, ಕಾಳೀರಯ್ಯ, ಹಾಪ್‍ಕಾಮ್ಸ್ ಸ್ವಾಮಿ, ಹೇಮಕುಮಾರ್, ಮಂಜು, ಯಾಕೂಬ್, ಶೇಖರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







