ಜ.26ರಂದು ‘ಸಂವಿಧಾನ ರಕ್ಷಿಸಿ’ ಪಾದಯಾತ್ರೆ: ಪವಾರ್ ನೇತೃತ್ವ
ಸೀತಾರಾಮ್ ಯೆಚೂರಿ, ಜಿಗ್ನೇಶ್, ಅಲ್ಪೇಶ್, ಹಾರ್ದಿಕ್ ಪಾಲ್ಗೊಳ್ಳುವ ಸಾಧ್ಯತೆ

ಮುಂಬೈ,ಜ.15: ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು ಹಾಗೂ ಮುಖ್ಯ ನ್ಯಾಯಮೂರ್ತಿ ನಡುವೆ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೇಶದ ಸಂವಿಧಾನದ ರಕ್ಷಣೆಗೆ ಆಗ್ರಹಿಸಿ ಜನವರಿ 26ರಂದು ಮುಂಬೈನಲ್ಲಿ ನಡೆಯಲಿರುವ ಪಾದಯಾತ್ರೆಯ ನೇತೃತ್ವವನ್ನು ಮಾಜಿ ಕೇಂದ್ರ ಸಚಿವ ಹಾಗೂ ಎನ್‌ಸಿಪಿ ವರಿಷ್ಠ ಶರದ್ ಪವಾರ್ ವಹಿಸಲಿದ್ದಾರೆ.
ಕಳೆದ ವರ್ಷ ಬಿಜೆಪಿ ವಿರುದ್ಧ ಬಂಡೆದ್ದಿರುವ ಪಕ್ಷದ ಮಹಾರಾಷ್ಟ್ರ ಸಂಸದ ರಾಜುಶೆಟ್ಟಿ ಅವರು ಸಂವಿಧಾನದ ರಕ್ಷಣೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಲು ಜಂಟಿ ರ್ಯಾಲಿಯನ್ನು ಆಯೋಜಿಸಲಾಗಿದೆಯೆಂದು ತಿಳಿಸಿದ್ದಾರೆ.
‘‘ಸಂವಿಧಾನದ ಮೇಲೆ ಬಿಜೆಪಿಯ ನಿರಂತರ ದಾಳಿಗಳ ಬಗ್ಗೆ ನಾನು ಆತಂಕ ಗೊಂಡಿದ್ದೇನೆ. ಈ ವಿಷಯವಾಗಿ ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯ ಮೂರ್ತಿಗಳು ಸಾರ್ವಜನಿಕರ ಬಳಿ ತೆರಳಿದಾಗ ಸಂವಿಧಾನವನ್ನು ರಕ್ಷಣೆಗೆ ಆಗ್ರಹಿಸಿ ಮುಂಬೈಯಲ್ಲಿ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಿದೆ ಹಾಗೂ ಇದಕ್ಕಾಗಿ ಹಲವಾರು ಮುಖಂಡರನ್ನು ಆಹ್ವಾನಿಸಿದ್ದೇನೆ’’ ಎಂದು ತಿಳಿಸಿದ್ದಾರೆ.
ಸಂವಿಧಾನದ ಮೇಲಿನ ನಿರಂತರ ದಾಳಿ ಖಂಡಿಸಿ, ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ದಿನವಿಡೀ ಗೇಟ್‌ವೇ ಆಫ್ ಇಂಡಿಯಾ ಬಳಿ ಧರಣಿ ನಡೆಸಲಾಗುವುದು ಹಾಗೂ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ರಾಜುಶೆಟ್ಟಿ ಹೇಳಿದ್ದಾರೆ.
ಸಿಪಿಎಂ ನಾಯಕ ಸೀತಾರಾಮ್ ಯಚೂರಿ, ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್, ದಲಿತಹೋರಾಟಗಾರ, ಶಾಸಕ ಜಿಗ್ನೇಶ್ ಮೇವಾನಿ, ಪಟೇಲ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆಯೆಂದು ಪಾದಯಾತ್ರೆಯ ಸಂಘಟಕರಲ್ಲೊಬ್ಬರು ತಿಳಿಸಿದ್ದಾರೆ,
ಬಂಡಾಯ ಜೆಡಿಯು ನಾಯಕ ಶರದ್ ಯಾದವ್, ಮಹಾತ್ಮಗಾಂಧಿಯವ ರ ಮರಿಮಗ ತುಷಾರ್ ಗಾಂಧಿ ಅವರನ್ನು ಕೂಡಾ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್‌ನ ಹಿರಿಯ ನಾಲ್ವರು ನ್ಯಾಯಾಧೀಶರು ಕಳೆದ ಶುಕ್ರವಾರ ಬಹಿರಂಗ ಪತ್ರಿಕಾಗೋಷ್ಠಿ ಕರೆದು, ಮುಖ್ಯ ನ್ಯಾಯಮೂರ್ತಿಯವರು ಮಹತ್ವದ ಪ್ರಕರಣಗಳ ಹಂಚಿಕೆಯಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಆರೋಪಿಸಿದ್ದರು. ಹಾಗೂ ಮುಖ್ಯ ನ್ಯಾಯಮೂರ್ತಿ ನೀಡಿರುವ ಕೆಲವು ಆದೇಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.