ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ‘ಯಾತ್ರಿ ನಿವಾಸ್’ ಉದ್ಘಾಟನೆ

ಮಂಗಳೂರು, ಜ. 15: ಬಿಕರ್ನಕಟ್ಟೆ ಕಾರ್ಮೆಲ್ ಗುಡ್ಡದ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಸೋಮವಾರ 1 ಕೋಟಿ ರೂ. ವೆಚ್ಚದ ‘ಯಾತ್ರಿ ನಿವಾಸ್’ ಕಟ್ಟಡದ ಉದ್ಘಾಟನೆ ನೆರವೇರಿತು.
ಆಹಾರ ಸಚಿವ ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೊ ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರು ಸಂಯುಕ್ತವಾಗಿ ‘ಯಾತ್ರಿ ನಿವಾಸ’ವನ್ನು ಉದ್ಘಾಟಿಸಿದರು. ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಆಶೀರ್ವಚನವನ್ನು ನೆರವೇರಿಸಿದರು.
ಬಾಲ ಯೇಸು ಪುಣ್ಯ ಕ್ಷೇತ್ರಕ್ಕೆ ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ತಂಗಲು ಅನುಕೂಲವಾಗುವಂತೆ ರಾಜ್ಯ ಸರಕಾರದ ಅನುದಾನದ ನೆರವಿನಿಂದ ‘ಯಾತ್ರಿ ನಿವಾಸ್’ ನಿರ್ಮಾಣ ಮಾಡಲಾಗಿತ್ತು.
ಬಾಲ ಯೇಸು ಪುಣ್ಯಕ್ಷೇತ್ರದ ಪ್ರಧಾನ ಗುರು ಫಾ.ವಿಲ್ಫ್ರೆಡ್ ರೊಡ್ರಿಗಸ್, ನಿರ್ದೇಶಕ ಫಾ.ಪ್ರಕಾಶ್ ಡಿಕುನ್ಹಾ, ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥರಾದ ಫಾ. ಚಾರ್ಲ್ಸ್ ಸೆರಾವೊ, ಫಾ.ಪಿಯುಸ್ ಜೇಮ್ಸ್ ಡಿಸೋಜಾ, ಕಾರ್ಪೊರೇಟರ್ ಸಬಿತಾ ಮಿಸ್ಕಿತ್ ಮತ್ತಿತರರು ಉಪಸ್ಥಿತರಿದ್ದರು.
ಮೂವರಿಗೆ ಗೌರವ
ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣ ಮಾಡಿದ ರಿಚಾರ್ಡ್ ರೊಡ್ರಿಗಸ್, ಆರ್ಕಿಟೆಕ್ಟ್ ದಿಲೀಪ್ ಲೋಬೊ, ಪುಣ್ಯೆ ಕ್ಷೇತ್ರದ ಆವರಣಲ್ಲಿ ಇಂಟರ್‌ಲಾಕ್ ಅಳವಡಿಸಿದ ಪಿಯುಸ್ ಮೊಂತೇರೊ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣವಾಗಿದೆ. ರಾಜ್ಯ ಸರಕಾರ ಭರವಸೆ ನೀಡಿದ ಅನುದಾನದಲ್ಲಿ ಶೆ. 50 ರಷ್ಟನ್ನು ಮಾತ್ರ ಬಿಡುಗಡೆ ಮಾಡಿದ್ದು, ಬಾಕಿ ಉಳಿದಿರುವ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಪುಣ್ಯಕ್ಷೇತ್ರದ ಮುಖ್ಯಸ್ಥ ಾ.ವಿಲ್ಫ್ರೆಡ್ ರೊಡ್ರಿಗಸ್ ಇದೇ ಸಂದರ್ಭದಲ್ಲಿ ಸರಕಾರಕ್ಕೆ ಮನವಿ ಮಾಡಿದರು.
ಸೋಮವಾರ ಸಂಜೆ ಬಲಿಪೂಜೆ, ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ ನಡೆಯುವುದರೊಂದಿಗೆ ಎರಡು ದಿನಗಳ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿತು.
ರವಿವಾರ ಸಂಜೆ 6 ಗಂಟೆಗೆ ಲಕ್ನೋ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೆ.ಡಾ. ಜೆರಾಲ್ಡ್ ಜೆ. ಮಥಾಯಸ್ ಹಾಗೂ ಸೋಮವಾರ ಬೆಳಗ್ಗೆ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಅವರ ನೇತೃತ್ವದಲ್ಲಿ ಮಹೋತ್ಸವದ ಸಂಭ್ರಮದ ಬಲಿಪೂಜೆಗಳು ನೆರವೇರಿದವು. ಎರಡೂ ದಿನಗಳ ಹಬ್ಬದ ಸಂಭ್ರಮದ ಬಲಿಪೂಜೆಗಳಲ್ಲಿ ಕಿನ್ನಿಗೋಳಿಯ ಸೈಂಟ್ ಮೆರೀಸ್ ಶಾಲೆಯ ಪ್ರಾಂಶುಪಾಲ ಾ.ಸುನಿಲ್ ಪಿಂಟೊ ಅವರು ಪ್ರವಚನ ನೀಡಿದರು. ಬಲಿಪೂಜೆಗಳ ಹೊರತಾಗಿ ಬೆಳಗ್ಗಿನಿಂದ ಸಂಜೆವರೆಗೆ ಕೊಂಕಣಿ, ಕನ್ನಡ, ಇಂಗ್ಲಿಷ್, ಮಲಯಾಳ ಭಾಷೆಗಳಲ್ಲಿ ಬಲಿಪೂಜೆಗಳು ನಡೆದವು. ಸಾವಿರಾರು ಮಂದಿ ಭಕ್ಕರು ಭಾಗವಹಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು.







