5ಜಿ ಆ್ಯಂಟೆನಾ ಅಭಿವೃದ್ಧಿಗೊಳಿಸಿದ ಕಾನ್ಪುರದ ವಿದ್ಯಾರ್ಥಿಗಳು

ಲಕ್ನೊ, ಜ.15: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ, ಇದರ ಮೂವರು ಸಂಶೋಧನಾ ವಿದ್ಯಾರ್ಥಿಗಳು 5ಜಿ ಸಂಪರ್ಕ ವ್ಯವಸ್ಥೆಗೆ ಪೂರಕವಾದ ಅತ್ಯಾಧುನಿಕ ಆ್ಯಂಟೆನಾವನ್ನು ಅಭಿವೃದ್ಧಿಗೊಳಿಸಿದ್ದಾರೆ. ಯಶಿಕಾ ಶರ್ಮ, ದೀಪ್‌ಶಂಕರ್ ಮತ್ತು ಕೆ.ಸೌರಭ್ ಎಂಬ ವಿದ್ಯಾರ್ಥಿಗಳು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ ಕುಮಾರವೈಭವ್ ಶ್ರೀವಾಸ್ತವ ಅವರ ಮಾರ್ಗದರ್ಶನದಲ್ಲಿ ಆ್ಯಂಟೆನಾವನ್ನು ಅಭಿವೃದ್ಧಿಗೊಳಿಸಿದ್ದಾರೆ.
2017ರ ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ನಡೆದಿದ್ದ ‘ಆಧುನಿಕ ಆ್ಯಂಟೆನಾ ಸಂಶೋಧನೆ’ ಎಂಬ ಕುರಿತಾದ ವಿಚಾರಸಂಕಿರಣದಲ್ಲಿ ಯಶಿಕಾ ಶರ್ಮ ತನ್ನ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದು, 5ಜಿ ತಂತ್ರಜ್ಞಾನದಲ್ಲಿ ಸಂದೇಶಗಳನ್ನು ರವಾನಿಸುವಲ್ಲಿ ಈ ವ್ಯವಸ್ಥೆಯ ಕಾರ್ಯಸಾಧ್ಯತೆಯನ್ನು ಕಂಡುಕೊಂಡ ಬಳಿಕ ಈ ಪ್ರಬಂಧವನ್ನು ಅಂಗೀಕರಿಸಲಾಗಿದೆ. ಸಣ್ಣ ಪ್ರದೇಶಗಳಲ್ಲಿ ಹಲವು ಚಿಕ್ಕ, ಪ್ರಬಲ ಆ್ಯಂಟೆನಾಗಳನ್ನು ಕೆಲವು ಉಪಕರಣಗಳ ಸಹಿತ ಅಳವಡಿಸಿದರೆ 5ಜಿ ವಯರ್‌ಲೆಸ್ ನೆಟ್‌ವರ್ಕ್ ಮೂಲಕ ಮಾಹಿತಿಗಳನ್ನು ಕ್ಷಿಪ್ರವಾಗಿ ರವಾನಿಸಲು ಸಾಧ್ಯ ಎಂಬುದು ಈ ಮೂವರು ಸಂಶೋಧಕರ ವಿಶ್ವಾಸವಾಗಿದೆ.
ಮುಂದಿನ ದಿನಗಳಲ್ಲಿ ರಸ್ತೆಗಿಳಿಯಬೇಕೆಂದು ಯೋಚಿಸಿರುವ ಡ್ರೈವರ್‌ರಹಿತ ಕಾರಿನ ಕನಸಿಗೆ ಈ 5ಜಿ ಆ್ಯಂಟೆನಾ ಶಕ್ತಿ ತುಂಬಲಿದೆ. ಅಲ್ಲದೆ, ಈ ತಂತ್ರಜ್ಞಾನದ ಮೂಲಕ ವೈದ್ಯರು ದೂರದ ಸ್ಥಳದಲ್ಲಿದ್ದರೂ ರೋಗಿಯ ಆಪರೇಷನ್ ನಡೆಸಲು ಸಾಧ್ಯವಾಗುತ್ತದೆ. ಜತೆಗೆ, ಮಿಲ್ಲಿಸೆಕೆಂಡ್‌ನಷ್ಟು ಸಮಯದಲ್ಲಿ(1 ಸಾವಿರ ಮಿಲ್ಲಿಸೆಕೆಂಡ್ ಅಂದರೆ ಒಂದು ಸೆಕೆಂಡ್) ವೆಬ್‌ಪುಟಗಳಿಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಬಹುದಾಗಿದೆ ಎಂದು ಈ ಮೂವರು ಸಂಶೋಧಕರು ತಿಳಿಸಿದ್ದಾರೆ.