ವಿಶ್ವಕಪ್ ಅವಕಾಶಕ್ಕಾಗಿ ವಿಂಡೀಸ್ ಹೋರಾಟ
ದುಬೈ, ಜ.15: ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ವೆಸ್ಟ್‌ಇಂಡೀಸ್ ತಂಡ 2019ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಅವಕಾಶ ಪಡೆಯಲು ಫೆಬ್ರವರಿಯಲ್ಲಿ ಹೋರಾಟ ನಡೆಸಲಿದೆ. ಮಾರ್ಚ್ 4ರಿಂದ 25ರ ತನಕ ಝಿಂಬಾಬ್ವೆಯಲ್ಲಿ ನಡೆಯಲಿರುವ ವಿಶ್ವಕಪ್‌ನ ಅರ್ಹತಾ ಸುತ್ತಿನ ಟೂರ್ನಿಯಲ್ಲಿ 2 ಸ್ಥಾನಗಳಿಗಾಗಿ ವೆಸ್ಟ್ ಇಂಡೀಸ್ ಸೇರಿದಂತೆ 10 ತಂಡಗಳು ಹಣಾಹಣಿ ನಡೆಸಲಿವೆೆ.
ವೆಸ್ಟ್‌ಇಂಡೀಸ್, ಅಫ್ಘಾನಿಸ್ತಾನ, ಐರ್ಲೆಂಡ್ ಮತ್ತು ಝಿಂಬಾಬ್ವೆ ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುವಲ್ಲಿ ವಿಫಲಗೊಂಡಿವೆ. 2017, ಸೆ.30ರ ಹೊತ್ತಿಗೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿದ್ದ ಅಗ್ರ 8 ತಂಡಗಳು ನೇರ ಪ್ರವೇಶ ಪಡೆದಿವೆ.
ಒಟ್ಟು 10 ತಂಡಗಳು ಅರ್ಹತಾ ಟೂರ್ನಿಯಲ್ಲಿ ಎರಡು ಗುಂಪುಗಳಲ್ಲಿ ಸೆಣಸಾಡಲಿವೆೆ. ವೆಸ್ಟ್‌ಇಂಡೀಸ್, ಐರ್ಲೆಂಡ್, ಹಾಲೆಂಡ್, ಪಪುವಾ ನ್ಯೂಗಿನಿ ಮತ್ತು ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಶನ್ -2 ಚಾಂಪಿಯನ್ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ನಮೀಬಿಯಾದಲ್ಲಿ ಫೆ.8ರಿಂದ 15ರ ತನಕ ನಡೆಯಲಿರುವ ಟೂರ್ನಿಯಲ್ಲಿ ಸೆಣಸಾಡಲಿದೆ.
ಅಫ್ಘಾನಿಸ್ತಾನ, ಝಿಂಬಾಬ್ವೆ, ಸ್ಕಾಟ್ಲೆಂಡ್, ಹಾಂಕಾಂಗ್ ಮತ್ತು ಐಸಿಸಿ ವರ್ಲ್ಡ್‌ಕ್ರಿಕೆಟ್ ಲೀಗ್ ಡಿವಿಶನ್ -2ರಲ್ಲಿ ದ್ವಿತೀಯ ಸ್ಥಾನ ಪಡೆದ ತಂಡ ‘ಬಿ’ ಗುಂಪಿನಲ್ಲಿ ಹೋರಾಟ ನಡೆಸಲಿದೆ. ಝಿಂಬಾಬ್ವೆಯಲ್ಲಿ ಮಾ.4ರಿಂದ 25ರ ತನಕ ಪಂದ್ಯಗಳು ನಡೆಯಲಿದೆ.







