ಉತ್ತರಪ್ರದೇಶಕ್ಕೆ ರೋಚಕ ಜಯ
ಮುಶ್ತಾಕ್ ಅಲಿ ಟ್ರೋಫಿ
ರಾಯ್‌ಪುರ, ಜ.15: ಮಧ್ಯಮ ವೇಗದ ಬೌಲರ್ ಅಮಿತ್ ಮಿಶ್ರಾ ಅಮೋಘ ಬೌಲಿಂಗ್ ನೆರವಿನಿಂದ ಉತ್ತರಪ್ರದೇಶ ತಂಡ ರಣಜಿ ಚಾಂಪಿಯನ್ ವಿದರ್ಭ ವಿರುದ್ಧ ಮುಶ್ತಾಕ್ ಅಲಿ ಟ್ರೋಫಿಯಲ್ಲಿ 6 ರನ್‌ಗಳಿಂದ ರೋಚಕ ಜಯ ಸಾಧಿಸಿದೆ.
ಸೋಮವಾರ ನಡೆದ ಕೇಂದ್ರ ವಲಯದ ಟ್ವೆಂಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರಪ್ರದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 137 ರನ್ ಗಳಿಸಿತ್ತು. ಶಿವಂ ಚೌಧರಿ(51), ಆಕಾಶ್‌ದೀಪ್‌ನಾಥ್(35) ಎರಡಂಕೆಯ ಕೊಡುಗೆ ನೀಡಿದರು. ವಿದರ್ಭ ಪರ ಶ್ರೀಕಾಂತ್ ವಾಘ್(3-28), ರವಿಕುಮಾರ್(3-29) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಉತ್ತರ ಪ್ರದೇಶವನ್ನು ಕಡಿಮೆ ಮೊತ್ತಕ್ಕೆ ಕಡಿವಾಣ ಹಾಕಿದ್ದರು. ಗೆಲ್ಲಲು 138 ರನ್ ಗುರಿ ಪಡೆದಿದ್ದ ವಿದರ್ಭ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ನಾಯಕ ಫೈಝ್ ಫಝಲ್(32), ಅಪೂರ್ವ್ ವಾಕಡೆ(33) ಹಾಗೂ ಅಕ್ಷಯ್(20) ದೊಡ್ಡ ಕೊಡುಗೆ ನೀಡಲು ವಿಫಲರಾದರು. 10 ರನ್‌ಗೆ 4 ವಿಕೆಟ್ ಉರುಳಿಸಿದ ಅಮಿತ್ ಮಿಶ್ರಾ ಉತ್ತರಪ್ರದೇಶಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಹರ್ಯಾಣ, ಮಧ್ಯಪ್ರದೇಶಕ್ಕೆ ಜಯ
ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಹರ್ಯಾಣ ಹಾಗೂ ಮಧ್ಯಪ್ರದೇಶ ತಂಡಗಳು ಜಯಭೇರಿ ಬಾರಿಸಿವೆ. ಟೂರ್ನಿಯ ಉತ್ತರವಲಯ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಸರ್ವಿಸಸ್ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತ್ತು. ನಕುಲ್ ಶರ್ಮ 42 ರನ್ ಗಳಿಸಿದರು. ಗೆಲ್ಲಲು ಸುಲಭ ಸವಾಲು ಪಡೆದ ಹರ್ಯಾಣ ಶಿವಂ ಚೌಹಾಣ್ 54 ರನ್ ನೆರವಿನಿಂದ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ 6 ವಿಕೆಟ್‌ಗಳ ನಷ್ಟಕ್ಕೆ 141 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು. ಮಧ್ಯಪ್ರದೇಶ-ರೈಲ್ವೇಸ್ ನಡುವೆ ನಡೆದ ಕೇಂದ್ರ ವಲಯ ಪಂದ್ಯದಲ್ಲಿ ಮಧ್ಯಪ್ರದೇಶ 24 ರನ್‌ಗಳ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಮಧ್ಯಪ್ರದೇಶ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 135 ರನ್ ಗಳಿಸಿತು. ಹರ್‌ಪ್ರೀತ್ ಸಿಂಗ್ 50 ರನ್ ಗಳಿಸಿದ್ದರು.
ಗೆಲ್ಲಲು 136 ರನ್ ಸವಾಲು ಪಡೆದಿದ್ದ ರೈಲ್ವೇಸ್ ತಂಡ ಆವೇಶ್ ಖಾನ್(2-16)ನೇತೃತ್ವದ ಮಧ್ಯಪ್ರದೇಶ ಬೌಲರ್‌ಗಳ ದಾಳಿಗೆ ತತ್ತರಿಸಿ 6 ವಿಕೆಟ್‌ಗಳ ನಷ್ಟಕ್ಕೆ 111 ರನ್ ಗಳಿಸಿ ಸೋಲೊಪ್ಪಿಕೊಂಡಿತು.







