ನೇಶನ್ಸ್ ಕಪ್: ಮೂರು ಚಿನ್ನ ಜಯಿಸಿದ ಭಾರತದ ಬಾಕ್ಸರ್ ಗಳು

ಸೊಮ್‌ಬೊರ್(ಸರ್ಬಿಯ), ಜ.15: ಭಾರತದ ಯುವ ಬಾಕ್ಸರ್‌ಗಳು ವಿಶ್ವ ಮಟ್ಟದಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಏಳನೇ ಆವೃತ್ತಿಯ ನೇಶನ್ಸ್ ಕಪ್‌ನಲ್ಲಿ ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದಾರೆ.
ಯೂತ್ ವಿಭಾಗದಲ್ಲಿ ಜಾನಿ(60 ಕೆ.ಜಿ.)ಹಂಗೇರಿಯದ ವಿಕ್ಟೋರಿಯಾ ಮಾಟ್ಸೆಝ್‌ರನ್ನು ಹಾಗೂ ಲಲಿತಾ(64 ಕೆ.ಜಿ.)ರಶ್ಯದ ವಲಿಯಂಟ್ ಕರಿನಾರನ್ನು ಮಣಿಸಿ ಚಿನ್ನ ಗೆದ್ದುಕೊಂಡರು.
81 ಕೆ.ಜಿ. ವಿಭಾಗದಲ್ಲಿ ನಂದಿನಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟರು. ನಂದಿನಿ ಪೊಲೆಂಡ್‌ನ ಅಲೆಸಾಂಡ್ರಾ ಜೊಂಕಾರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಪೊಲೆಂಡ್‌ನ ಇನ್ನೋರ್ವ ಬಾಕ್ಸರ್ ಕಲುಝಾ ಬೀಟಾ ವಿರುದ್ಧ ಸೋತಿರುವ ರಾಜ್‌ಬಾಲಾ(54 ಕೆ.ಜಿ.) ಕಂಚಿಗೆ ತೃಪ್ತಿಪಟ್ಟುಕೊಂಡರು. ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವೀರೋಚಿತ ಪ್ರದರ್ಶನ ನೀಡಿ ಈಗಾಗಲೇ 2018ರ ಬೇಸಿಗೆ ಯುತ್ ಒಲಿಂಪಿಕ್ ಗೇಮ್ಸ್‌ಗೆ ಅರ್ಹತೆ ಪಡೆದಿರುವ ಜ್ಯೋತಿ ಗುಲಿಯಾ ಭಾರತವನ್ನು ಮುನ್ನಡೆಸುತ್ತಿದ್ದಾರೆ. ''2018ರ ಬೇಸಿಗೆ ಯೂತ್ ಒಲಿಂಪಿಕ್ ಗೇಮ್ಸ್‌ಗೆ ನಾವು ಸಾಧ್ಯವಾದಷ್ಟು ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಬಯಸಿದ್ದೇವೆ. ಈ ನಿಟ್ಟಿಯಲ್ಲಿ ಯುವ ಬಾಕ್ಸರ್‌ಗಳು ವಿದೇಶದಲ್ಲಿ ಉನ್ನತ ಮಟ್ಟದ ತರಬೇತಿ ಪಡೆಯುವ ಅಗತ್ಯವಿದೆ. ನೇಶನ್ಸ್ ಕಪ್‌ನಲ್ಲಿ ಸ್ಪರ್ಧಿಸುತ್ತಿರುವ ಎಲ್ಲರೂ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತೋರಿರುವ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸ ನನಗಿದೆ'' ಎಂದು ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.







