ಜ.17: ಕಬಕದಲ್ಲಿ ಸಮಸ್ತ ವಿಸ್ತರಿಕರಣ, ಅನುಸ್ಮರಣಾ ಸಮ್ಮೇಳನ
ಪುತ್ತೂರು,ಜ.15: ಎಸ್.ಕೆ.ಎಸ್.ಎಸ್.ಎಫ್ ಕಬಕ ಶಾಖೆ ಮತ್ತು ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ವತಿಯಿಂದ ಕಬಕ ಬಗ್ಗುಮೂಲೆ ಮೈದಾನದಲ್ಲಿ ಸಮಸ್ತ ವಿಸ್ತರಿಕರಣ ಮತ್ತು ಅನುಸ್ಮರಣಾ ಸಮ್ಮೇಳನ ಜ.17ರಂದು ರಾತ್ರಿ ಜರುಗಲಿದೆ ಎಂದು ಕಬಕ ಯುನಿಟ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಅರ್ಷದ್ ಕೆ.ಎಸ್ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಸಮಸ್ತದ ಕುರಿತು ನಾಸರ್ ಫೈಝಿ ಕೊಡತ್ತಾಯ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಲ್ ಇಸ್ಲಾಹ್ ಸಾಹಿತ್ಯ ಸಮಾಜ ವಿದ್ಯಾಪುರ ಇದರ ಗೌರವಾಧ್ಯಕ್ಷ ಸಯ್ಯದ್ ಅಲ್ ಹಾದಿ ಯಹ್ಯಾ ತಂಙಳ್ ಪೋಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಬಕ ಜೆ.ಎಂ ಮುದರ್ರಿಸ್ ಬಿ.ಎನ್ ಹಾಜಿ ಮುಹಮ್ಮದ್ ಮುಸ್ಲಿಯಾರ್ ದುವಾ ಆಶೀರ್ವಚನ ನೀಡಲಿದ್ದಾರೆ. ಸಯ್ಯದ್ ಮುಹಮ್ಮದ್ ತಂಙಳ್ ಅಲ್ ಬುಖಾರಿ ಕಬಕ ಗೌರವ ಉಪಸ್ಥಿತಿಯಲ್ಲಿ ಸಾಲ್ಮರ ಜುಮಾ ಮಸ್ಜಿದ್‍ನ ಖತೀಬರಾದ ಅಲ್‍ಹಾಜ್ ಪಿ.ಎಂ ಉಮರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮನ್ನಂಗುಝಿ ಮುದರ್ರಿಸ್ ಜಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್‍ರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಸೇವಕರಾಗಿ ಗುರುತಿಸಲ್ಪಟ್ಟ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಮತ್ತು ಎಸ್.ಕೆ.ಐ.ಎಂ.ವಿ.ಬಿಯ ಸದಸ್ಯ ಹಾಜಿ ಕೆ.ಎಸ್ ಇಸ್ಮಾಯಿಲ್ ಕಲ್ಲಡ್ಕ ಅವರನ್ನು ಎಸ್.ಕೆ.ಎಸ್.ಎಸ್.ಎಫ್ ಕಬಕ ಶಾಖೆ ಮತ್ತು ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ವತಿಯಿಂದ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಅಲ್ ಹಿದಾಯ ದಫ್ ಸಂಘ ಪೋಳ್ಯ ಇವರಿಂದ ದಫ್ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಉಪಾಧ್ಯಕ್ಷ ಶಾಕೀರ್, ಕೋಶಾಧಿಕಾರಿ ಜಮೀರುದ್ದೀನ್, ಎಸ್.ಕೆ.ಎಸ್.ಎಸ್.ಎಫ್ ಸಹಚರಿ ಕಾರ್ಯದರ್ಶಿ ಅನ್ಸಾಫ್ ಉಪಸ್ಥಿತರಿದ್ದರು.







