ಮೆಡಿಕಲ್ ಕಾಲೇಜು ಹಗರಣದಲ್ಲಿ ಕೇಳಿಬಂದ ಸುಪ್ರೀಂಕೋರ್ಟ್, ಅಲಹಾಬಾದ್ ಹೈಕೋರ್ಟ್ ಹೆಸರು!
thewire.in ವಿಶೇಷ ತನಿಖಾ ವರದಿ

ನ್ಯಾಯಾಂಗ ಬಿಕ್ಕಟ್ಟಿನಲ್ಲಿ ಮತ್ತೊಂದು ತಿರುವು
ಅನುಕೂಲಕರ ತೀರ್ಪಿಗಾಗಿ ಲಂಚದ ಬೇಡಿಕೆ ಇಡಲಾಗಿತ್ತೇ?
ಹೊಸದಿಲ್ಲಿ, ಜ.16: ಲಕ್ನೋ ಮೆಡಿಕಲ್ ಕಾಲೇಜು ಹಗರಣಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋನ್ ಮಾತುಕತೆಗಳು ಇದೀಗ ಈ ಪ್ರಕರಣ ಹಾಗು ಇತ್ತೀಚಿಗಿನ ನ್ಯಾಯಾಂಗ ಬಿಕ್ಕಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಪ್ರಕರಣದ ಆರೋಪಿಗಳಾದ ನಿವೃತ್ತ ಒಡಿಶಾ ಹೈಕೋರ್ಟ್ ನ್ಯಾಯಾಧೀಶ ಐ.ಎಂ. ಖುದ್ದೂಸಿ, ಮಧ್ಯವರ್ತಿ ವಿಶ್ವನಾಥ್ ಅಗರ್ವಾಲ ಹಾಗು ಬಿ.ಪಿ. ಯಾದವ್ ರ ಫೋನ್ ಮಾತುಕತೆಯನ್ನು ಸಿಬಿಐ ದಾಖಲಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ಹಾಗು ಅಲಹಾಬಾದ್ ಹೈಕೋರ್ಟ್ ನ ‘ಕೆಲವರಿಗೆ’ ಅನುಕೂಲಕರ ತೀರ್ಪಿಗಾಗಿ ಲಂಚ ನೀಡಲು ಕಾಲೇಜು ಅಧಿಕಾರಿಗಳು ನಿರ್ಧರಿಸಿದ್ದರು ಎನ್ನುವುದು ಈ ಮಾತುಕತೆಯಿಂದ ಬಯಲಾಗಿದೆ.
ಈ ಬಗ್ಗೆ thewire.in ವಿಸ್ತೃತ ವರದಿಯನ್ನು ಪ್ರಕಟಿಸಿದೆ. ಈ ಬೆಳವಣಿಗೆಯು ಸದ್ಯ ಸುಪ್ರೀಂ ಕೋರ್ಟ್ ಚೀಫ್ ಜಸ್ಟಿಸ್ ದೀಪಕ್ ಮಿಶ್ರಾ ಹಾಗು ಇತರ ನಾಲ್ವರು ಹಿರಿಯ ನ್ಯಾಯಾಧೀಶರ ಬಿಕ್ಕಟ್ಟು ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಮೆಡಿಕಲ್ ಕಾಲೇಜಿ ಹಗರಣಕ್ಕೆ ಸಂಬಂಧಿಸಿ ಈ ಮೂವರು ಆರೋಪಿಗಳು ಲಂಚ, ಕೋರ್ಟ್ ಗೆ ಬದಲಾಗಿ ‘ಪ್ರಸಾದ’, ‘ಮಂದಿರ’ ಎನ್ನುವ ಶಬ್ಧಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಮೂಲಭೂತ ಸೌಕರ್ಯಗಳು ಕೊರತೆಯ ಹಿನ್ನೆಲೆಯಲ್ಲಿ ಈ ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸದಂತೆ ಕೇಂದ್ರ ಸರಕಾರ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
2017ರ ಆಗಸ್ಟ್ ನಿಂದ 2017 ಸೆಪ್ಟಂಬರ್ ವರೆಗೆ ನಡೆದ ವಿಚಾರಣೆಯಲ್ಲಿ ಕಾಲೇಜು ಟ್ರಸ್ಟ್ ಪರವಾಗಿ ತೀರ್ಪು ಬಂದಿತ್ತು. ವಿಚಾರಣೆ ನಡೆಸಿದ್ದ ಎಲ್ಲಾ ಪೀಠಗಳ ನೇತೃತ್ವವನ್ನು ಜಸ್ಟೀಸ್ ಮಿಶ್ರಾ ವಹಿಸಿದ್ದರು.