ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪತ್ರಿಕಾಗೋಷ್ಠಿಯನ್ನು ‘ಅಕ್ಷಮ್ಯ’ ಎಂದ ಆರೆಸ್ಸೆಸ್ ನಾಯಕ!

ಹೊಸದಿಲ್ಲಿ, ಜ.16: ಕಳೆದ ಶುಕ್ರವಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಸಿಡಿದೆದ್ದು ನಾಲ್ಕು ಮಂದಿ ಹಿರಿಯ ನ್ಯಾಯಾಧೀಶರು ನಡೆಸಿದ ಪತ್ರಿಕಾಗೋಷ್ಠಿಯನ್ನು `ಸ್ಪಷ್ಟ ರಾಜಕೀಯ ಸಂಚು' ಎಂದು ಆರೆಸ್ಸೆಸ್ಸಿನ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಜೆ ನಂದಕುಮಾರ್ ಹೇಳಿದ್ದಾರೆ.
ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿರುವ ಅವರು, ನಾಲ್ಕು ಮಂದಿ ನ್ಯಾಯಾಧೀಶರು ಅಕ್ಷಮ್ಯವಾದುದನ್ನು ಮಾಡಿದ್ದಾರೆ ಹಾಗೂ ಜನರು ನ್ಯಾಯಾಂಗ ವ್ಯವಸ್ಥೆಯ ಮೇಲಿರಿಸಿದ ಅಪಾರ ನಂಬಿಕೆಯ ಮೇಲೆಯೇ ದಾಳಿ ನಡೆಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ನಾಲ್ಕು ಮಂದಿ ನ್ಯಾಯಾಧೀಶರುಗಳೂ ‘ನೀರಿಗೆ ವಿಷವಿಕ್ಕಿದ್ದಾರೆ’. 1994ರ ಸಿಖ್ ವಿರೋಧಿ ದಂಗೆಗಳ ಪ್ರಕರಣಗಳನ್ನು ಮತ್ತೆ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ನೀಡಿದ್ದ ಆದೇಶದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು ಅವರು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯ ನಂತರದ ತನಕ ಅಯೋಧ್ಯೆ ಪ್ರಕರಣವನ್ನು ಮುಂದೂಡಬೇಕೆಂದು ಹೇಳಿದ್ದ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿರುವುದನ್ನೂ ನಂದಕುಮಾರ್ ಸ್ಮರಿಸಿದ್ದಾರೆ.
``ಈ ಎಲ್ಲಾ ಬೆಳವಣಿಗೆಗಳು ಹಾಗೂ ನ್ಯಾಯಾಧೀಶರ ಪತ್ರಿಕಾಗೋಷ್ಠಿಯ ನಂತರ ಅವರಲ್ಲೊಬ್ಬರನ್ನು ಕಾಣಲು ಎಡಪಂಥೀಯ ನಾಯಕ ಡಿ ರಾಜಾ ಅವರ ನಿವಾಸಕ್ಕೆ ಹೋಗಿರುವುದು, ಇದೆಲ್ಲಾ ಒಂದು ರಾಜಕೀಯ ಸಂಚು ಎಂಬುದನ್ನು ಸ್ಪಷ್ಟ ಪಡಿಸುತ್ತದೆ'' ಎಂದು ನಂದಕುಮಾರ್ ಹೇಳಿದ್ದಾರೆ.
``ಪತ್ರಿಕಾಗೋಷ್ಠಿಯನ್ನು ಟಿವಿಯಲ್ಲಿ ನೋಡಿದ್ದೇನೆ, ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಲೋಯಾ ಸಂಬಂಧಿಸಿದ ಪ್ರಶ್ನೆಗೆ ಕಿವಿಗೊಡಲಿಲ್ಲ. ಆದರೆ ಲೋಯಾ ಪ್ರಕರಣದ ಪರಿಣಾಮ ಈ ಪತ್ರಿಕಾಗೋಷ್ಠಿ ನಡೆಯಿತೆಂದು ಒಂದು ರಾಜಕೀಯ ಪಕ್ಷ ಹೇಳಿಕೊಂಡಿರುವುದರಿಂದ ಈ ಇಡೀ ಪ್ರಕರಣ ರಾಜಕೀಯದಿಂದ ಕೂಡಿದೆ'' ಎಂದು ನಂದಕುಮಾರ್ ಹೇಳಿದ್ದಾರೆ.