ಹಜ್ ಯಾತ್ರಾರ್ಥಿಗಳ ಸಬ್ಸಿಡಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಜ.16: ಹಜ್ ಯಾತ್ರಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿರುವುದಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ. ಈ ನಿರ್ಧಾರ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡದೆ ಅವರನ್ನು ಸಬಲೀಕರಣಗೊಳಿಸುವ ಕೇಂದ್ರ ಸರಕಾರದ ಸಿದ್ಧಾಂತದ ಭಾಗವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ 1.75 ಲಕ್ಷ ಯಾತ್ರಿಗಳು ಹಜ್ಗೆ ಸಬ್ಸಿಡಿ ಇಲ್ಲದೆಯೇ ತೆರಳಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಕಳೆದ ವರ್ಷ 1.25 ಲಕ್ಷ ಮಂದಿ ಹಜ್ಗೆ ವಾರ್ಷಿಕ ಯಾತ್ರೆಯಲ್ಲಿ ತೆರಳಿದ್ದರು. ಹಜ್ ಸಬ್ಸಿಡಿ ನಿಲ್ಲಿಸಿರುವುದರಿಂದ 700 ಕೋಟಿ ರೂ. ಉಳಿಕೆಯಾಗಲಿದ್ದು ಅದನ್ನು ಸರಕಾರವು ಅಲ್ಪಸಂಖ್ಯಾತರ ಮುಖ್ಯವಾಗಿ ಬಾಲಕಿಯರ ಶಿಕ್ಷಣಕ್ಕೆ ಬಳಸಲಿದೆ ಎಂದು ನಖ್ವಿ ತಿಳಿಸಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು, ಪುರುಷ ಜೊತೆಗಾರರು ಇಲ್ಲದೆ ಹಜ್ ಯಾತ್ರೆಗೆ ತೆರಳಲು ಸರಕಾರ ಅನುಮತಿ ನೀಡಿದ ಒಂದು ದಿನದ ನಂತರ ಹಜ್ ಸಬ್ಸಿಡಿಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡಿದೆ.
ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಮಲ್ ಫಾರೂಕಿ, ಮುಸ್ಲಿಮರು ಸರಕಾರದಿಂದ ಲಾಭವನ್ನು ಪಡೆಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಎಲ್ಲರ ಮನಸ್ಸಿನಲ್ಲಿಯೂ ಇತ್ತು. ಆದರೆ ನಿಜವಾಗಿ ಈ ಸಬ್ಸಿಡಿಯ ಲಾಭ ಪಡೆಯುತ್ತಿದ್ದವರು ಏರ್ ಇಂಡಿಯಾ ಸಂಸ್ಥೆ ಎಂದು ತಿಳಿಸಿದ್ದಾರೆ.
ಹಜ್ ಯಾತ್ರಿಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ನಿಧಾನವಾಗಿ ಕಡಿತಗೊಳಿಸಿ 2022ರ ವೇಳೆಗೆ ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಕಳೆದ ವರ್ಷ ಮೇ ತಿಂಗಳಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಿತ್ತು.