ಲಾಲು ಎರಡನೆ ಅಳಿಯನಿಗೆ ಇಡಿ ಸಮನ್ಸ್

ಹೊಸದಿಲ್ಲಿ,ಜ.16: ಮೇವು ಹಗರಣ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣದ ವಹಿವಾಟು ಆರೋಪದಲ್ಲಿ ಲಾಲು ಪುತ್ರಿ ಮಿಸಾ ಭಾರತಿ ಮತ್ತು ಇತರರ ವಿರುದ್ಧ ತಾನು ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರ ಎರಡನೇ ಅಳಿಯ ರಾಹುಲ್ ಯಾದವ್ ಗೆ ಸಮನ್ಸ್ ಜಾರಿಗೊಳಿಸಿದೆ.
ಲಾಲುರ ನಾಲ್ಕನೇ ಪುತ್ರಿ ರಾಗಿಣಿಯ ಪತಿಯಾಗಿರುವ ರಾಹುಲ್ ತನ್ನ ಅತ್ತೆ ರಾಬ್ರಿದೇವಿಗೆ ಸುಮಾರು ಒಂದು ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದನ್ನು ಇಡಿ ಪತ್ತೆ ಹಚ್ಚಿದೆಯೆನ್ನಲಾಗಿದ್ದು, ಈ ವಾರದೊಳಗೆ ತನಿಖಾಧಿಕಾರಿಯ ಎದುರು ಹಾಜರಾಗಿ ಈ ವರ್ಗಾವಣೆಯನ್ನು ವಿವರಿಸುವಂತೆ ಅವರಿಗೆ ನಿರ್ದೇಶ ನೀಡಲಾಗಿದೆ.
ಈ ಪ್ರಕರಣದಲ್ಲಿ ಮೀಸಾ ಭಾರತಿಯ ಪತಿ ಶೈಲೇಶ್ ಕುಮಾರ್ ಅವರನ್ನು ಇಡಿ ಈಗಾಗಲೇ ಹಲವಾರು ಬಾರಿ ಪ್ರಶ್ನಿಸಿದೆ. ಪ್ರಕರಣವು ಮೆ.ಮಿಶಾಲಿ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್ ಪ್ರೈ.ಲಿ.ನಿಂದ ಅಕ್ರಮ ಹಣದ ವಹಿವಾಟಿಗೆ ಸಂಬಂಧಿಸಿದ್ದು, ಭಾರತಿ ಮತ್ತು ಶೈಲೇಶ್ ಕುಮಾರ ಜೊತೆ ತಳುಕು ಹಾಕಿಕೊಂಡಿದೆ ಎನ್ನಲಾಗಿದೆ.