ಜನ ಆಶೀರ್ವದಿಸಿದರೆ ನೆನಗುದಿಗೆ ಬಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧ : ಈಶ್ವರಪ್ಪ

ಕಡೂರು, ಜ.16: ರಾಜ್ಯದ ಜನ ಆಶೀರ್ವದಿಸಿದರೆ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ದವಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ತಾಲೂಕು ನಾಗರೀಕರ ಹಿತರಕ್ಷಣೆ ಮತ್ತು ಸಾಂಸ್ಕೃತಿಕ ಸಂಘಟನಾ ವೇದಿಕೆ ಪಟ್ಟಣದ ಉಪ್ಪಾರ ಸಂಘದ ನಿವೇಶನದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ದಾರ್ಶನಿಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಡೂರು ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿದೆ. ಶಾಶ್ವತ ನೀರಾವರಿ ಮತ್ತು ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ರಾಜ್ಯಾದ್ಯಂತ ಇದೇ ತರದ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಾಮಾಣಿಕವಾಗಿ ಬಗೆಹರಿಸುವುದಾಗಿ ತಿಳಿಸಿದರು.
ಎಲ್ಲಾ ದಾರ್ಶನಿಕರು ಮತ್ತು ಮಠಾಧೀಶರನ್ನು ಒಂದೆಡೆ ಆಹ್ವಾನಿಸಿ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿಬೇಧವಿಲ್ಲದೇ ಎಲ್ಲ ಸಮುದಾಯಗಳ ಮಠಗಳು ಸಾಮಾಜಿಕ ಕಾರ್ಯಗಳನ್ನು ಮಾಡಲು ಅನುವಾಗುವಂತೆ ಅನುದಾನ ನೀಡಿದ್ದೇವೆ ಎಂದ ಅವರು ಗಿರೀಶ್ ಉಪ್ಪಾರ್ ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಮೆಚ್ಚುವಂಥಹುದು ಎಂದು ಅಭಿಪ್ರಾಯಪಟ್ಟರು.
ಉತ್ತರ ಪ್ರದೇಶದ ತೋಟಗಾರಿಕಾ ಸಚಿವ ಮತ್ತು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ದಾರಾಸಿಂಗ್ ಚೌಹಾಣ್ ಮಾತನಾಡಿ, ಗ್ರಾಮಾಂತರ ಜನರಿಗೆ ಅತ್ಯಂತ ಅಗತ್ಯವಾದ ಕುಡಿಯುವ ನೀರು ಮತ್ತು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಿರೀಶ್ ಉಪ್ಪಾರ್ ಅವರ ಕಾರ್ಯ ಎಲ್ಲರಿಗೂ ಅನುಕರಣೀಯ ಎಂದರು.
ಹಣ್ಣೆಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ ಮಾತನಾಡಿ, ಮಾತೃಭೂಮಿಯ ರಕ್ಷಣೆ ಮತ್ತು ಕೃಷಿ ಕ್ಷೇತ್ರದಲ್ಲಿ ಇಸ್ರೆಲ್ ದೇಶದ ನಡೆ ನಮ್ಮ ಕಣ್ಣು ತೆರೆಸುವಂತಹದು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಹಿಡಿದಿಟ್ಟುಕೊಂಡು ಗ್ರಾಮೀಣ ಕೆರೆಗಳನ್ನು ತುಂಬಿಸುವಂತಹ ಯೋಜನೆಗೆ ಸರ್ಕಾರ ಮುಂದಾಗಬೇಕು.ಆ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಡೂರಿನಂತಹ ಬರಪ್ರದೇಶದ ಕೆರೆಗಳಿಗೆ ನೀರು ಹರಿಸುವ ಸರ್ಕಾರದ ಕ್ರಮ ಸಮಯೋಚಿತವಾಗಿದೆ ಎಂದರು.
ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮಿ ಮಾತನಾಡಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ಗಿರೀಶ್ ಉಪ್ಪಾರ್ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ರೇಣುದೇವಿ,ಉಪ್ಪಾರ ಫೆಡರೇಷನ್ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಪಿ.ಸಿಂಗ್, ರಾಜಾಸ್ಥಾನದ ಮಾಜಿ ಸಚಿವ ರಾಜೇಂದ್ರ ಸಿಂಗ್ ರಾಜಪುರೋಹಿತ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ, ಸರ್ದಾರ್‍ಸೇವಾಲಾಲ್ ಸ್ವಾಮೀಜಿ, ಡಾ.ಶಾಂತವೀರ ಸ್ವಾಮೀಜಿ, ಬೀರೂರು ರುದ್ರಮುನಿ ಸ್ವಾಮೀಜಿ, ದಯಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಮತ್ತು ಮಾಜಿ ಶಾಸಕ ವೈ.ಸಿ.ವಿಶ್ವನಾಥ್, ಬೀರೂರು ದೇವರಾಜ್, ರೇಖಾಹುಲಿಯಪ್ಪಗೌಡ, ಕೆ.ಬಿ.ಸೋಮೇಶ್,ರಾಜೇಶ್,ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಎಂ. ತಿಪ್ಪೇಶ್ ಮತ್ತಿತರರಿದ್ದರು.







