ದೇಶದ ರಾಜಧಾನಿ ಯಾವುದೆಂದು ಗೊತ್ತಿಲ್ಲದ ಮಕ್ಕಳೆಷ್ಟಿದ್ದಾರೆ ?
ಎಎಸ್‌ಇಆರ್ ವರದಿಯಲ್ಲಿದೆ ಆಘಾತಕಾರಿ ಅಂಶಗಳು…

ಹೊಸದಿಲ್ಲಿ, ಜ. 16: ದೇಶದ 14-16 ವಯಸ್ಸಿನ ನಾಲ್ಕನೇ ಒಂದು ಭಾಗ ಮಕ್ಕಳಿಗೆ ತಮ್ಮ ಭಾಷೆಯನ್ನು ಸುಲಲಿತವಾಗಿ ಓದಲು ಸಾಧ್ಯವಾಗುವುದಿಲ್ಲ. ಇವರಲ್ಲಿ ಶೇ. 57 ಮಕ್ಕಳಿಗೆ ಸರಳ ವಿಭಜನೆ ಲೆಕ್ಕವನ್ನು ಪರಿಹರಿಸಲು ಕಷ್ಟಪಡುತ್ತಾರೆ ಎಂದು ಗ್ರಾಮೀಣ ಶಿಕ್ಷಣ ಮಂಗಳವಾರ ಬಿಡುಗಡೆ ಮಾಡಿದ ಸಮೀಕ್ಷಾ ವರದಿ ತಿಳಿಸಿದೆ.
ಭಾರತದ ಭೂಪಟ ತೋರಿಸಿದರೆ ಶೇ. 14 ಮಕ್ಕಳಿಗೆ ಗುರುತಿಸಲು ಸಾಧ್ಯವಾಗುವುದಿಲ್ಲ. ಶೇ. 36 ಮಕ್ಕಳಿಗೆ ದೇಶದ ರಾಜಧಾನಿಯ ಹೆಸರು ಗೊತ್ತಿಲ್ಲ. ಶೇ. 21 ಮಕ್ಕಳಿಗೆ ತಾವು ಜೀವಿಸುತ್ತಿರುವ ರಾಜ್ಯದ ಹೆಸರು ತಿಳಿದಿಲ್ಲ. ಗ್ರಾಮೀಣ ಭಾರತದಲ್ಲಿ ಶಿಕ್ಷಣದ ಹೀನಾಯ ಸ್ಥಿತಿಯನ್ನು ಈ ಸಮೀಕ್ಷಾ ವರದಿ ಬಹಿರಂಗಗೊಳಿಸಿದೆ.
2017ರಲ್ಲಿ ಗ್ರಾಮೀಣ ಭಾರತದ ಶಿಕ್ಷಣ ವರದಿಯ ವಾರ್ಷಿಕ ಮಟ್ಟದ ಸಮೀಕ್ಷೆಯನ್ನು 24 ರಾಜ್ಯಗಳ 28 ಜಿಲ್ಲೆಗಳಲ್ಲಿ ನಡೆಸಲಾಗಿತ್ತು.
ಈ ಸನ್ನಿವೇಶ ದಿಗ್ಭ್ರಮೆಗೊಳಿಸುವಂತದ್ದು ಹಾಗೂ ಏನು ನಡೆಯುತ್ತಿದೆ? ಏನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕಾದ ವಿಚಾರ ಎಂದು ಮುಖ್ಯ ಹಣಕಾಸು ಸಲಹೆಗಾರ ಅರವಿಂದ್ ಸುಬ್ರಹ್ಮಣೀಯಂ ತಿಳಿಸಿದ್ದಾರೆ.
ಕಲಿಕೆಯ ಫಲಿತಾಂಶದಲ್ಲಿ ಬಾಲಕರು ಹಾಗೂ ಬಾಲಕಿಯರ ನಡುವೆ ವ್ಯತ್ಯಾಸವಿಲ್ಲ. ಆದರೆ, ಈ ಸಮಸ್ಯೆ 14-18ರ ನಡುವೆ ಇರುವುದರಿಂದ ಪರಿಹರಿಸುವುದು ತುಂಬಾ ಮುಖ್ಯವಾದುದು ಎಂದು ಅವರು ತಿಳಿಸಿದ್ದಾರೆ.







