ದೇಶದ ಭದ್ರತೆ ಮತ್ತು ಏಕತೆಗೆ ಶಾಂತಿ ಸೌಹಾರ್ಧ ಅಗತ್ಯ : ತ್ವಾಕಾ ಅಹ್ಮದ್ ಮುಸ್ಲಿಯಾರ್
ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್ ವತಿಯಿಂದ ಅಂಬುಲೆನ್ಸ್ ಸಮರ್ಪಣೆ

ಪುತ್ತೂರು,ಅ.16: ಭಾರತದ ಭದ್ರತೆ ಮತ್ತು ಏಕತೆಗೆ ಇಲ್ಲಿ ಶಾಂತಿ ಸೌರ್ಹಾಧತೆ ಅಗತ್ಯವಾಗಿದ್ದು, ಆಂತರಿಕ ಕಚ್ಚಾಟ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ಕೋಮುವಾದ ಭಯೋತ್ಪಾದನೆ ತುಂಬಾ ಕಾಲ ನಡೆಯುವುದಿಲ್ಲ ಎಂದು ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಅವರು ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್ ವತಿಯಿಂದ ಸೋಮವಾರ ರಾತ್ರಿ ನಡೆದ ಅಂಬುಲೆನ್ಸ್ ಸಮರ್ಪಣಾ ಕಾರ್ಯಕ್ರಮ ಮತ್ತು ಏಕದಿನ ಮತ ಪ್ರಭಾಷಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದ ಪ್ರಜೆಗಳ ಆತಂರಿಕ ಕಚ್ಚಾಟ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ಲೆಬನಾನ್, ಸಿರಿಯ, ಅಪ್ಘಾನಿಸ್ಥಾನ ಮೊದಲಾದ ದೇಶಗಳಲ್ಲಿ ನಡೆಯುವ ಪ್ರಕ್ರಿಯೆಗಳು ನಮಗೆ ಪಾಠವಾಗಬೇಕು. ಬಾಂಬ್, ಕೊಲೆ ಸಂಸ್ಕೃತಿ , ಅನಾಗಕರಿತೆಯ ಲಕ್ಷಣವಾಗಿದ್ದು ಮಾನವೀಯತೆ ಮೆರೆಯುವುದೇ ಇಂದಿನ ನಾಗಕರಿಕತೆಗೆ ತಕ್ಕುದಾಗಿದ್ದು , ಕೋಮುವಾದ ಭಯೋತ್ಪಾದನೆ ತುಂಬಾ ಕಾಲ ನಡೆಯುವುದಿಲ್ಲ. ಹೊಸ ತಲೆಮಾರು ಈ ಬಗ್ಗೆ ಜಾಗೃತರಾಗಿರುವ ಲಕ್ಷಣಗಳು ಗೋಚರಿಸುತ್ತಿದೆ. ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್ ಕೊಡಮಾಡಿದ ಅಂಬುಲೆನ್ಸ್ ಸೇವೆ ಸರ್ವ ಜಾತಿ , ಮತ ಬಾಂಧವರಿಗೆ ಪ್ರಯೋಜನಕಾರಿಯಾಗಲಿ . ಈ ನಿಟ್ಟಿನಲ್ಲಿ ಇದು ಶಾಂತಿಯ ದ್ಯೋತಕವಾಗಲಿ ಎಂದು ಹೇಳಿದರು.
ಅಂಬುಲೆನ್ಸ್ ನ ಕೀಯನ್ನು ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್ ನ ಅಧ್ಯಕ್ಷ ಎಲ್. ಟಿ ರಝಾಕ್ ಹಾಜಿ ಅವರಿಗೆ ಹಸ್ತಾಂತರ ಮಾಡುವ ಮೂಲಕ ಖಾಝಿಯವರು ಸೇವೆಯನ್ನು ಲೋಕಾರ್ಪಣೆಗೈದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಕೇಂದ್ರ ಜುಮಾ ಮಸೀದಿ ಖತೀಬ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಮಾತನಾಡಿ ಸಮುದಾಯದ ಉಲಮಾಗಳ ಮಾರ್ಗದರ್ಶನ ಪಡೆದು ಉಮರಾಗಳು ಕಾರ್ಯರಂಗಕ್ಕಿಳಿದರೆ ಸಮಾಜ ಅಭಿವೃದ್ದಿ ಹೊಂದುತ್ತದೆ ಆದರೆ ಅಧಿಕಾರಕ್ಕಾಗಿ ಪೈಪೋಟಿ ನಡೆಸುವ ಪರಿಪಾಠ ಇತ್ತೀಚೆಗೆ ಬೆಳೆದು ಬರುತ್ತಿದ್ದು ಇದರಿಂದ ಸಮಾಜ ಅವನತಿ ಹೊಂದುತ್ತದೆ ಎಂದರು. ಪುತ್ತೂರಿನಲ್ಲಿ ಮುಸ್ಲಿಂ ಸಮುದಾಯದ ಕಾಲೇಜು ಇಲ್ಲದೆ ವಿದ್ಯಾಬ್ಯಾಸಕ್ಕಾಗಿ ಹೆಣ್ಣುಮಕ್ಕಳು ಕಷ್ಟಪಡುತ್ತಿದ್ದು ಸಮುದಾಯಕ್ಕೆ ಕಾಲೇಜು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಮುದಾಯ ಮುಂದೆ ಬರಬೇಕು ಎಂದು ಹೇಳಿದರು.
ಪ್ರಮುಖ ಪ್ರಭಾಷಣ ನೀಡಿದ ಸುನ್ನಿ ಯುವ ವಿದ್ವಾಂಸ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರು ಇಸ್ಲಾಮಿನಲ್ಲಿ ಪ್ರವಾದಿ ಚರ್ಯೆಗೆ ಪ್ರಾಧಾನ್ಯತೆ ಇದ್ದು ಅದನ್ನು ಪಾಲಿಸಿದರೆ ಜೀವನದಲ್ಲಿ ಸಮೃದ್ದಿ ಉಂಟಾಗುತ್ತದೆ. ಊಟೊಪಾಚರದಿಂದ ಹಿಡಿದು ನಿದ್ದೆಯ ತನಕ ಎಲ್ಲದರಲ್ಲೂ ಪ್ರವಾದಿ ಮಾದರಿಯು ಇಂದಿನ ಆಧುನಿಕ ಯುಗದಲ್ಲಿ ತುಂಬ ಉಪಯುಕ್ತವಾಗಿದೆ ಎಂದರು.
ನಿಂತು ತಿನ್ನುವುದು, ಅದಾನ್ ವೇಳೆ ಮಾತನಾಡುವುದು , ಎಡಗೈಯಲ್ಲಿ ಪಾನೀಯ ಕುಡಿಯುವುದು , ತಿನ್ನುವುದು ಮುಂತಾದ ಅಶಿಸ್ತುಗಳು ನಮ್ಮ ಜೀವನವನ್ನೇ ದುರಸ್ಥರಗೊಳಿಸುತ್ತದೆ. ತಂದೆ ತಾಯಿಯೊಂದಿಗೆ ಸಂಬಂಧ ಗಟ್ಟಿಗೊಳಿಸುವುದು, ನೆರೆಕರೆಯವರೊಂದಿಗೆ ಉತ್ತಮ ವರ್ತನೆ, ಗುರುಹಿರಯರೊಂದಿಗೆ ಗೌರವ ಮಕ್ಕಳ ಹಕ್ಕುಗಳನ್ನು ಪಾಲಿಸುವುದು ಮೊದಲಾದ ಶಿಷ್ಟಾಚಾರಗಳು ಮುಸ್ಲಿಮರಿಗೆ ಕಡ್ಡಾಯವಾಗಿದ್ದು ಪ್ರಮಾಣಿಕತೆ , ಸತ್ಯ ಸಂದತೆ ಹಾಗೂ ಪ್ರಯತ್ನಗಳು ಜನರನ್ನು ವಿಕಸನದತ್ತ ಕೊಂಡೊಯ್ಯುವ ಸಂಗತಿಗಳಾಗಿದೆ ಎಂದು ಹೇಳಿದರು. ನಾವು ಇಂದು ಇಸ್ಲಾಮಿನ ಆಚಾರ ವಿಚಾರಗಳನ್ನು , ಪ್ರವಾದಿಯವರ ಚರ್ಯೆಗಳನ್ನು ಜೀವನದಲ್ಲಿ ಪಾಲಿಸದೆ ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದೇವೆ ಇದರಿಂದ ನಮ್ಮ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವೇ ಇಲ್ಲ. ಬಡವರಿಗಾಗಿ ಉಚಿತವಾಗಿ ಅಂಬುಲೆನ್ಸ್ ಸೇವೆಯನ್ನು ಒದಗಿಸುವ ಮೂಲಕ ಶಂಸುಲ್ ಉಲಮಾ ಸೋಶಿಯಲ್ ಟ್ರಸ್ಟ್ ಜಿಲ್ಲೆಗೆ ಮಾದರಿ ಸಂಘಟನೆಯಾಗಿದೆ. ನೂರಾರು ಸಂಘಟನೆಗಳು ನಮ್ಮ ಸಮಾಜದಲ್ಲಿ ಇದೆ ಆದರೆ ಈ ರೀತಿಯ ಸಮಾಜ ಸೇವೆಯನ್ನು ಮಾಡುವ ಮೂಲಕ ಸಂಘಟನೆಗಳು ಜನರ ನಡುವೆ ಮಾದರಿ ಎನಿಸಬೇಕು ಹಾಗಿದ್ದಲ್ಲಿ ಮಾತ್ರ ನಾವು ಅಲ್ಲಾಹನ ಪ್ರೀತಿಗೆ ಪಾತ್ರರಾಗಲು ಸಾಧ್ಯ ಎಂದು ಹೇಳಿದರು.
ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಎಸ್. ಬಿ ಮಹಮ್ಮದ್ ದಾರಿಮಿ, ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಸಂಚಾಲಕ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆಂಪಿ ಮುಸ್ತಫಾ ಶುಭ ಹಾರೈಸಿದರು. ಸಂಪ್ಯ ಮಸೀದಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ದುವಾ ನೆರವೇರಿಸಿದರು. ಹಲವಾರು ಧಾರ್ಮಿಕ, ಸಾಮಾಜಿಕ ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್.ಬಿ. ಮುಹಮ್ಮದ್ ದಾರಿಮಿ ಸ್ವಾಗತಿಸಿದರು. ನೌಫಲ್ ನಿರೂಪಿಸಿದರು.







