ಕರ್ನಾಟಕಕ್ಕೆ ಸುಳ್ಳು ಹೇಳುವುದೇ ವಾಡಿಕೆ: ಮತ್ತೆ ವಿವಾದ ಸೃಷ್ಟಿಸಿದ ಗೋವಾ ಸಚಿವರ ಹೇಳಿಕೆ

ಪಣಜಿ, ಜ.16: ಕನ್ನಡಿಗರು ಹರಾಮಿಗಳು ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಗೋವಾದ ಜಲಸಂಪನ್ಮೂಲ ಸಚಿವ ವಿನೋದ್ ಪಾಳೇಕರ್ ಮಂಗಳವಾರದಂದು ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸುಳ್ಳನ್ನೇ ಹೇಳುತ್ತದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕರ್ನಾಟಕದ ಬಗ್ಗೆ ವಿಷ ಕಾರಿದ್ದಾರೆ.
ಕರ್ನಾಟಕವು ಗೋವಾ ಮತ್ತು ಗೋವಾದ ಜನರನ್ನು ಸುಳ್ಳುಗಾರರು ಎಂದು ತಿಳಿದಿದ್ದರೆ ಅದು ತಪ್ಪು. ಬದಲಾಗಿ ಕರ್ನಾಟಕವೇ ಮಹಾದಾಯಿ ವಿಚಾರದಲ್ಲಿ ಸುಳ್ಳುಗಳನ್ನು ಹೇಳುತ್ತಾ ಬಂದಿದೆ ಮತ್ತು ಅದರ ಸುಳ್ಳುಗಳು ಮಹಾದಾಯಿ ಜಲ ವಿವಾದ ಪೀಠದ ಮುಂದೆ ಬಯಲಾಗಿದೆ ಎಂದು ಪಾಳೇಕರ್ ತಿಳಿಸಿದ್ದಾರೆ.
ಕರ್ನಾಟಕದ ಬಗ್ಗೆ ಹೀನ ಪದ ಬಳಕೆ ಮಾಡಿದ ಕಾರಣಕ್ಕೆ ಪಾಳೇಕರ್ ಪರವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕದ ಜಲಸಂಪನ್ಮೂಲ ಸಚಿವರಾದ ಎಂ.ಬಿ ಪಾಟೀಲ್ ಆಗ್ರಹಿಸಿದ ಬೆನ್ನಿಗೇ ಗೋವಾ ಸಚಿವರು ಈ ರೀತಿ ಹೇಳಿಕೆ ನೀಡಿದ್ದಾರೆ. ಕರ್ನಾಟಕವು ಕಳಸಾ-ಬಂಡೂರಿ ಕಾಲುವೆಯ ಕಾಮಗಾರಿಯನ್ನು ಮುಂದುವರಿಸಿದೆ. ಕೆಲದಿನಗಳ ಹಿಂದೆ ನಾನು ಕೆಲ ಇಂಜಿನಿಯರ್‌ಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ್ದು ಕರ್ನಾಟಕವು ಕಾಮಗಾರಿಯನ್ನು ಮುಂದುವರಿಸಿದಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಈ ಬಗ್ಗೆ ನಾವು ಸಾಕ್ಷಿಗಳನ್ನು ಕಲೆ ಹಾಕಿದ್ದು ಅದನ್ನು ಪೀಠದ ಮುಂದೆ ಇಡುತ್ತೇವೆ ಎಂದು ಪಾಳೇಕರ್ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ ಪಾಟೀಲ್, ಗೋವಾ ಸಚಿವರು ಕನಕುಂಬಿಗೆ ಭೇಟಿ ನೀಡಿ ಕರ್ನಾಟಕ ಕಳಸ-ಬಂಡೂರಿ ಕಾಮಗಾರಿಯನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದಾರೆ. ಆದರೆ ಇದು ಸುಳ್ಳು. ಅವರು ನೋಡಿರುವುದು ನಾವು ಹಿಂದೆ ನಡೆಸಿರುವಂಥ ಕಾಮಗಾರಿಯನ್ನು ಎಂದು ತಿಳಿಸಿದ್ದರು. ಕರ್ನಾಟಕದ ಪ್ರಸ್ತಾಪಿತ ಅಣೆಕಟ್ಟಿನ ಕುರಿತ ಗೋವಾದ ವಾದವನ್ನು ಪೀಠವು ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಆಲಿಸಲಿದೆ.