ಜನಪ್ರತಿನಿಧಿಗಳು ಮೆಟ್ರೋ ಬಳಸಲಿ: ಎಚ್.ಎಂ.ರೇವಣ್ಣ

ಬೆಂಗಳೂರು, ಜ.16: ಜನಪ್ರತಿನಿಧಿಗಳು ಮೆಟ್ರೋ ರೈಲು ಬಳಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಆಶಿಸಿದರು.
ಮಂಗಳವಾರ ನಗರದ ನಾಯಂಡನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲಿನಲ್ಲಿ ವಿಧಾನಸೌಧದವರೆಗೆ ಪ್ರಯಾಣ ಮಾಡಿದ ನಂತರ ಮಾತನಾಡಿದ ಅವರು, ವೆುಟ್ರೋ ರೈಲಿನಲ್ಲಿ ಸಂಚರಿಸುವುದು ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಅಗತ್ಯವಾದ ಅಂಶವಾಗಬೇಕೆಂದು ತಿಳಿಸಿದರು.
ದಿನ ಕಳೆದಂತೆಲ್ಲಾ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮಿತಿ ಮೀರುತ್ತಿದೆ. ಇದರ ಜೊತೆಗೆ ವಾಯು ಮಾಲಿನ್ಯ ನಗರವನ್ನು ಮುತ್ತಿಕೊಂಡಿದೆ. ಹೀಗಾಗಿ ಬೆಂಗಳೂರನ್ನು ವಾಯುಮಾಲಿನ್ಯ ಮುಕ್ತ ನಗರವನ್ನಾಗಿಸಬೇಕಾದರೆ ಪ್ರಸ್ತುತ ಮೆಟ್ರೋ ರೈಲಿನಲ್ಲಿ ಸಂಚರಿಸುವುದೊಂದೇ ನಮ್ಮ ಮುಂದಿರುವ ಮಾರ್ಗವೆಂದು ಅವರು ತಿಳಿಸಿದರು.
ನನಗೆ ಭಯವಿಲ್ಲ: ಮೆಟ್ರೋ ರೈಲಿನಲ್ಲಿ ಸಂಚರಿಸುವುದರಿಂದ ಭಯವಾಗಲಿ, ಅಂಜಿಕೆಯಾಗಲಿ ಇಲ್ಲ. ಸಾರ್ವಜನಿಕರಲ್ಲಿ ನಾನೊಬ್ಬನಾಗಿ ಇರಲು ಇಷ್ಟ ಪಡುತ್ತೇನೆ. ತಪ್ಪು ಮಾಡುವವರಿಗೆ ಆತಂಕವಿರುತ್ತದೆ. ಹೀಗಾಗಿ ಅಂತವರಿಗೆ ಭದ್ರತೆ ಬೇಕಾಗುತ್ತದೆ. ಆದರೆ, ನನ್ನಂತಹ ಸಾಮಾನ್ಯನಿಗೆ ಯಾವುದೇ ಭದ್ರತೆಯ ಅಗತ್ಯವಿಲ್ಲ ಎಂದು ತಿಳಿಸಿದರು.





