ಅಂತರ್ಜಾತಿ ವಿವಾಹ ವಿರೋಧಿಸುವುದು ಕಾನೂನು ಬಾಹಿರ
ಖಾಪ್ ಪಂಚಾಯತ್ ಗಳಿಗೆ ಸುಪ್ರೀಂ ಮೂಗುದಾರ

ಹೊಸದಿಲ್ಲಿ, ಜ. 16: ಅಂತರ್ಜಾತಿ ವಿವಾಹವಾಗಲು ನಿರ್ಧರಿಸುವ ಪ್ರಾಪ್ತ ಮಹಿಳೆ ಹಾಗೂ ಪುರುಷನ ಮೇಲೆ ಖಾಪ್ ಪಂಚಾಯತ್ ಅಥವಾ ಸಂಘಟನೆಗಳು ಯಾವುದೇ ರೀತಿ ದಾಳಿ ಮಾಡುವುದು ‘ಸಂಪೂರ್ಣ ಕಾನೂನುಬಾಹಿರ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಒಂದು ವೇಳೆ ಪ್ರಾಪ್ತ ಪುರುಷ ಹಾಗೂ ಮಹಿಳೆ ವಿವಾಹವಾದರೆ, ಖಾಪ್, ಪಂಚಾಯತ್ ಅಥವಾ ಸೊಸೈಟಿ ಅವರನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ಬೇರೆ ಜಾತಿ ಅಥವಾ ಒಂದೇ ವಂಶದಲ್ಲಿ ವಿವಾಹವಾದ ಯುವ ದಂಪತಿಗೆ ಕುಟುಂಬ ಮರ್ಯಾದೆ ಹೆಸರಿನಲ್ಲಿ ಕಿರುಕುಳ ನೀಡುವುದು, ಹತ್ಯೆಗೈಯ್ಯುವುದನ್ನು ತಡೆಯುವ ದಿಶೆಯಲ್ಲಿ ಆಮಿಕಸ್ ಕ್ಯೂರಿ ರಾಜು ರಾಮಚಂದ್ರನ್ ನೀಡಿದ ಸಲಹೆಗಳ ಬಗ್ಗೆ ಕೇಂದ್ರ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಎ.ಎಂ. ಕನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡ ಪೀಠ ಸೂಚಿಸಿದೆ.
ಇಂತಹ ಪಂಚಾಯತ್‌ಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದರೆ, ತಾನೇ ಕ್ರಮ ತೆಗೆದುಕೊಳ್ಳಲಿದೆ ಎಂದು ಪೀಠ ಹೇಳಿದೆ. ಮರ್ಯಾದೆ ಹತ್ಯೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 2010ರಲ್ಲಿ ಸರಕಾರೇತರ ಸಂಘಟನೆ ಶಕ್ತಿ ವಾಹಿನಿ ಖಾಪ್ ಪಂಚಾಯತ್ ವಿರುದ್ಧ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.





