ಇಂಗ್ಲಿಷ್ ಮೇಲೆ ಅವಲಂಬನೆಯಿಂದ ಸೃಜನಶೀಲತೆ ನಾಶ: ಚಂದ್ರಶೇಖರ ಕಂಬಾರ
ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು, ಜ.16:ಇಂಗ್ಲಿಷ್ ಭಾಷೆಯ ಮೇಲಿನ ಅತಿಯಾದ ಅವಲಂಬನೆ ಮಕ್ಕಳಲ್ಲಿ ಸೃಜನಶೀಲತೆ ನಾಶ ಮಾಡುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ, ಪ್ರಶಸ್ತಿ, ಬಹುಮಾನ-2016 ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರಿಟಿಷರು ದೇಶಕ್ಕೆ ಬಂದ ಸಮಯದಲ್ಲಿ ಭಾರತೀಯರಲ್ಲಿ ಕೀಳರಿಮೆ ಬೆಳೆಸಿದರು. ಅವರು ಹೇಳಿದ್ದೇ ಸರಿ ಎಂದು ನಮ್ಮವರು ಒಪ್ಪಿಕೊಂಡರು. ಸಂಸ್ಕೃತವೆಲ್ಲ ಗೊಡ್ಡು ಎಂದು ಲೇವಡಿ ಮಾಡಿದ್ದರು. ಆದರೂ ನಾವು ಇಂದು ಇಂಗ್ಲಿಷ್ ಮೇಲೆ ಹೆಚ್ಚು ಅವಲಂಬಿತವಾಗಿದ್ದೇವೆ ಎಂದು ಅವರು ನುಡಿದರು.
ದೇಶದಲ್ಲಿ ಪರ ಭಾಷಿಗರ ಜತೆ ಇಂಗ್ಲಿಷ್‌ನಲ್ಲಿ ಮಾತನಾಡುವ ದುಸ್ಥಿತಿ ಇದೆ. ಇದು ಬದಲಾಗಬೇಕು. ಜತೆಗೆ ಪರಭಾಷಿಕರ ನಡುವೆ ತಮ್ಮ ಭಾಷೆಗಳಲ್ಲಿ ಮಾತನಾಡುವ ಸಂವಹನವನ್ನು ಸುಧಾರಿಸಬೇಕಿದೆ ಎಂದು ಅವರು ಕರೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬದ ಅಂಗವಾಗಿ ಪ್ರಾಧಿಕಾರದಿಂದ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಶ್ರವಣ ದೋಷ ಇರುವರಿಗೆ ಅನುಕೂಲಕರವಾದ ಧ್ವನಿ ಸುರುಳಿ ಪುಸ್ತಕ, ಪುಸ್ತಕ ಜಾಥಾ, ಸಂಚಾರಿ ಪುಸ್ತಕ ಮಾರಾಟ ಕೇಂದ್ರ ಆರಂಭಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಶಸ್ತಿ ಪ್ರದಾನ: 2016 ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ- ವಸಂತ ಪ್ರಕಾಶನ(ಶ್ರೀಮುರಳಿ), ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ- ಡಾ.ಸಂಗಮೇಶ ಸವದತ್ತಿ ಮಠ ಧಾರವಾಡ, ಡಾ.ಜಿ.ಪಿ.ರಾಜರತ್ನಂ ಪರಿಚಾರಕ ಪ್ರಶಸ್ತಿ- ಡಾ.ಅರ್ಜುನ್ ಯಲ್ಲಪ್ಪ ಗೊಳಸಂಗಿ,
ಗದಗ ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ- ಡಾ.ಪಿ.ಎಸ್. ಶಂಕರ್, ಕಲಬುರ್ಗಿ. 2016ನೇ ಸಾಲಿನ ಪುಸ್ತಕ ಸೊಗಸು ಬಹುಮಾನ 1ನೆ ಬಹುಮಾನ- ಅಣಿ ಅರದಲ ಸಿರಿ ಸಿಂಗಾರ-ಸಾಹಿತ್ಯ ಬಳಗ, ವಾಶಿ ಮುಂಬೈ ಸಂಪಾದಕ ಎಚ್.ಬಿ.ಎಲ್.ರಾವ್. 2ನೇ ಬಹುಮಾನ- ಕನಕಮಹಾ ಸಂಪುಟ, ತು ಮನು ಪ್ರಕಾಶನ ಮೈಸೂರು.
ಸಂಪಾದಕಿ ಮಾನಸ 3ನೇ ಬಹುಮಾನ-ತಾರತಮ್ಯ, ಮನೋಹರ ಗ್ರಂಥ ಮಾಲಾ, ಧಾರವಾಡ. ಸಂಪಾದಕ ಡಾ.ಶಿವಾನಂದ, ಎಂ.ಜಾಮದಾರ. ಮಕ್ಕಳ ಪುಸ್ತಕ ಸೊಗಸು ಬಹುಮಾನ- ಬಣ್ಣದ ಚಿಟ್ಟೆ, ಚಂದು ಪ್ರಕಾಶನ, ಚಿಕ್ಕಬಳ್ಳಾಪುರ. ಲೇಖಕ ಪಾತ ಮುತ್ತಕಹಳ್ಳಿ ಎಂ.ಚಲಪತಿಗೌಡ.
ಮುಖಪುಟ ಚಿತ್ರಕಲೆ ಬಹುಮಾನ- (ಬಿಸಿಲು ಬಯಲು ನೆಳಲು)ಕಲಾವಿದ ಸೃಜನ್, ಲೇಖಕ ಬಿ.ಶ್ರೀಪಾದ್ ಭಟ್. ಮುಖಪುಟ ಚಿತ್ರ ವಿನ್ಯಾಸ ಬಹುಮಾನ ಚಿತ್ರ ರಚನೆ- (ಲಾವೋನ ಕನಸು)ಕಿರಣ್ ಮಾಡಾಳು, ಸೌಮ್ಯ ಕಲ್ಯಾಣಕರ್.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ದೊಡ್ಡೇಗೌಡ ಮತ್ತಿತರರು ಇದ್ದರು.







