ಬಿಬಿಎಂಪಿ ಜಂಟಿ ಆಯುಕ್ತೆ ವಾಸಂತಿ ವಿರುದ್ಧ ಸಿಐಡಿ ತನಿಖೆಗೆ ಹೈಕೋರ್ಟ್ ಆದೇಶ
ಕಾನೂನು ಬಾಹಿರವಾಗಿ ಜಮೀನು ಖಾತೆ ಬದಲಾವಣೆ

ಬೆಂಗಳೂರು, ಜ.16: ಕಾನೂನು ಬಾಹಿರವಾಗಿ ಜಮೀನೊಂದರ ಖಾತೆಯ ಬದಲಾವಣೆಗೆ ಆದೇಶಿಸಿದ್ದ ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರಾದ ಡಾ.ಬಿ.ವಿ. ವಾಸಂತಿ ಅಮರ್ ವಿರುದ್ಧ ಸಿಐಡಿ ತನಿಖೆಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಅಲ್ಲದೆ, ತನಿಖೆ ಪೂರ್ಣಗೊಳ್ಳುವರೆಗೆ ವಾಸಂತಿ ಅವರನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಬೇಕು ಎಂದು ರಾಜ್ಯ ಕಂದಾಯ ಇಲಾಖೆಗೆ ನಿರ್ದೇಶಿಸಿದೆ.
ತಮಗೆ ಸೇರಿದ ಜಮೀನಿನ ಖಾತೆಯನ್ನು ಚಿನ್ನಮ್ಮ ಎಂಬುವರ ಹೆಸರಿಗೆ ಮಾಡಿಸಿಕೊಡಲು ಆದೇಶಿಸಿದ್ದ ಡಾ.ಬಿ.ವಿ. ವಾಸಂತಿ ಅಮರ್ ಅವರ ಆದೇಶ ರದ್ದು ಕೋರಿ ಮೆರ್ಸಸ್ ಅಪ್ನ ಸಪ್ನ ಕಂಪೆನಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶ್ರೇಣಿಯ ಅಧಿಕಾರಿಯು ಪ್ರಕರಣದ ತನಿಖೆ ನಡೆಸಬೇಕಿದೆ. ನ್ಯಾಯಾಲಯದ ಈ ಆದೇಶ ಪ್ರತಿ ಲಭ್ಯವಾದ ದಿನದಿಂದ 15 ದಿನಗಳ ಒಳಗೆ ತನಿಖೆ ಆರಂಭಿಸಬೇಕು. ನಂತರದ ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಬೇಕು. ಅಲ್ಲದೆ, ತನಿಖೆ ಪೂರ್ಣಗೊಳಿಸಿದ ಆರು ತಿಂಗಳ ಒಳಗಾಗಿ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಹಾಗೆಯೇ, ಡಾ.ವಾಸಂತಿ ಅಮರ್ ಅವರು ಹಿರಿಯ ಕೆಎಎಸ್ ಅಧಿಕಾರಿಯಾಗಿದ್ದು, ಸದ್ಯ ಬಿಬಿಎಂಪಿ ಮಹದೇವಪುರ ವಲಯ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಇದೇ ಸ್ಥಾನದಲ್ಲಿ ಮುಂದುವರಿದರೆ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ಸುಗಮ ತನಿಖೆಯ ದೃಷ್ಟಿಯಿಂದ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಬೇಡ. ತನಿಖೆ ಪೂರ್ಣಗೊಳ್ಳುವರೆಗೂ ರಾಜ್ಯ ಸರಕಾರವು ವಾಸಂತಿ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕು. ಸಿಐಡಿ ತನಿಖಾಧಿಕಾರಿಯ ಮುಂದೆ ವಾಸಂತಿ ಅವರು ತಮ್ಮ ವಾದ ಮಂಡಿಸಲು ಸ್ವತಂತ್ರರಾಗಿರುತ್ತಾರೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
ಪ್ರಕರಣವೇನು: ಆನೇಕಲ್ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸರ್ವೆ ನಂ 47ರಲ್ಲಿನ ಐದು ಎಕರೆ ಜಮೀನನ್ನು 1970ರಲ್ಲಿ ಮುನಿನಂಜಪ್ಪ ಎಂಬುವರು ವೆಂಕಟಪ್ಪ ಅವರಿಂದ ಖರೀದಿಸಿದ್ದರು. ಮುನಿನಂಜಪ್ಪ ಮರಣ ನಂತರ ಈ ಐದು ಎಕರೆ ಜಮೀನು ಪೈಕಿ 2 ಎಕರೆ 20 ಗುಂಟೆ ಜಾಗವನ್ನು ಮೃತರ ಪುತ್ರ ಚಿಕ್ಕಮುನಿಯಪ್ಪ ಮತ್ತವರ ಪತ್ನಿ ರತ್ಮಮ್ಮ ಹೆಸರಿಗೆ ಖಾತೆ ಮಾಡಲಾಗಿತ್ತು. ಈ ಕ್ರಮ ಪ್ರಶ್ನಿಸಿ ಮುನಿನಜಂಪ್ಪ ಅವರ ಮತ್ತೊಬ್ಬ ಪುತ್ರ ರಾಮಯ್ಯ ಅವರ ಪತ್ನಿ ಚಿನ್ಮಮ್ಮ 2005-06ರಲ್ಲಿ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಯ ಮುಂದೆ ಮೇಲ್ಮನವಿ ಸಲ್ಲಿಸಿದ್ದರು.
ಆ ಮೇಲ್ಮನವಿಯ ಸಂಬಂಧ 2012ರ ಎ.20ರಂದು ವಿಚಾರಣೆ ನಡೆಸಿದ್ದ ಅಂದಿನ ಉಪ ವಿಭಾಗಾಧಿಕಾರಿ ಡಾ.ವಾಸಂತಿ ಅಮರ್, ವಿವಾದಿತ 2 ಎಕರೆ 20 ಗುಂಟೆ ಜಮೀನನಿನ ಖಾತೆಯನ್ನು ಚಿನ್ಮಮ್ಮ ಹೆಸರಿಗೆ ಮಾಡಿಕೊಡಬೇಕು ಎಂದು ತಹಸೀಲ್ದಾರ್‌ಗೆ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿರುವ ಅರ್ಜಿದಾರ ಕಂಪೆನಿ, ಈ 2 ಎಕರೆ 20 ಗುಂಟೆ ಜಾಗವನ್ನು ರತ್ನಮ್ಮ ಅವರು ಕುಟುಂಬ ಸದಸ್ಯರಿಂದ 2005ರಲ್ಲಿ ನಾವು ಖರೀದಿಸಿದ್ದೆವು. ಈಗಾಗಲೇ ಈ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿಕೊಂಡು ಲೇಔಟ್ ನಿರ್ಮಾಣ ಮಾಡಲಾಗಿದೆ. ಜತೆಗೆ ಹಲವು ನಿವೇಶನ ಮಾರಾಟ ಮಾಡಲಾಗಿದೆ. ಆದರೆ, ಏಳು ವರ್ಷ ಕಾಲ ವಿಳಂಬವಾಗಿ ಚಿನ್ನಮ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ಡಾ.ವಾಸಂತಿ ಪುರಸ್ಕರಿಸಿ ಆದೇಶಿಸಿದ್ದಾರೆ. ಆ ಆದೇಶ ಹೊರಡಿಸುವ ಮುನ್ನ ತಮಗೆ ಯಾವುದೇ ನೋಟಿಸ್ ನೀಡಿಲ್ಲ. ಜಮೀನಿನ ಖಾತೆಯನ್ನು ಚಿನ್ನಮ್ಮ ಹೆಸರಿಗೆ ಮಾಡಿಕೊಡಲು ಕಾನೂನು ಬಾಹಿರವಾಗಿ ಆದೇಶ ಮಾಡಿದ್ದಾರೆ ಎಂದು ದೂರಿದರು.
ತಮ್ಮ ಆದೇಶದ ಕುರಿತು ಸ್ಪಷ್ಟೀಕರಣ ನೀಡಲು ನ್ಯಾಯಾಲಯವು ಡಾ.ವಾಸಂತಿ ಅವರಿಗೆ ಹಲವು ಬಾರಿ ಅವಕಾಶ ನೀಡಿದರು. ವಾಸಂತಿ ಅವರು ಸ್ಪಷ್ಟೀಕರಣ ನೀಡಿದರೂ, ಅದು ಸಮಂಜಸವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಪ್ರಕರಣದ ತನಿಖೆಗೆ ಆದೇಶಿಸಿದೆ. ಹಾಗೆಯೇ, ಚಿನ್ಮಮ್ಮ ಹೆಸರಿಗೆ ಖಾತೆ ಮಾಡಿಕೊಡಲು ವಾಸಂತಿ ಅವರು ಮಾಡಿದ್ದ ಆದೇಶವನ್ನು ರದ್ದುಪಡಿಸಿದೆ.







