ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ
ಮಂಡ್ಯ, ಜ.16: ಹಕ್ಕುಪತ್ರ ವಿತರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ವತಿಯಿಂದ ಜ.18ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸಮಿತಿ ಸಂಚಾಲಕ ಎಂ.ಬಿ.ನಾಗಣ್ಣಗೌಡ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದಿದೆ. ನಗರ ಹಾಗು ಗ್ರಾಮೀಣ ಪ್ರದೇಶದ ಸರಕಾರಿ ಭೂಮಿಗಳಲ್ಲಿರುವ ಬಡವರಿಗೆ, ಸ್ಲಂ ವಾಸಿಗಳಿಗೆ ಹಕ್ಕುಪತ್ರ ನೀಡುವುದಾಗಿ ಹೇಳಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಹಕ್ಕುಪತ್ರ ವಿತರಿಸಿಲ್ಲ ಎಂದರು.
ಭೂ ಕಂದಾಯ ಕಾಯ್ದೆ 94ಸಿ ಮತ್ತು 94ಸಿಸಿ ಅಡಿಯಲ್ಲಿ ನಗರ ಹಾಗು ಗ್ರಾಮೀಣ ಪ್ರದೇಶಗಳ ಸರಕಾರಿ ಭೂಮಿಯಲ್ಲಿ ವಾಸಿಸುವವರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮಂಡ್ಯ ತಾಲೂಕಿನ ಒಂದರಲ್ಲೇ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಜಿಲ್ಲಾಡಳಿತ ಒಂದು ಅರ್ಜಿಯನ್ನು ವಿಲೇವಾರಿ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಭೂಮಿಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಕ್ರಮಬದ್ಧವಾಗಿ ನೋಂದಣಿ ಹಕ್ಕುಪತ್ರ ಕೊಟ್ಟಿಲ್ಲದಿರುವುದರಿಂದ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಡವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.







