ಮಂಡ್ಯ: ಸೇವೆ ಖಾಯಂಗೆ ಒತ್ತಾಯಿಸಿ ಟಾಸ್ಕ್ ವರ್ಕ್ ನೌಕರರ ಪ್ರತಿಭಟನೆ

ಮಂಡ್ಯ, ಜ.16: ಗುತ್ತಿಗೆ ಪದ್ದತಿ ರದ್ದುಪಡಿಸಿ ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಟಾಸ್ಕ್ ವರ್ಕ್ ದಿನಗೂಲಿ ನೌಕರರು ಮಂಗಳವಾರ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೀರಾವರಿ ಇಲಾಖೆಯ ಟಾಸ್ಕ್ ವರ್ಕ್ ನೌಕರರ ಗುತ್ತಿಗೆ ಪದ್ದತಿಯನ್ನು ಕೂಡಲೇ ರದ್ದುಪಡಿಸಿ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಬೆಂಗಳೂರು, ಮೈಸೂರು ಮಹಾನಗರ ಪಾಲಿಕೆ ವಾಣಿವಿಲಾಸ ನೀರು ಸರಬರಾಜು ಮತ್ತು ಪೌರಕಾರ್ಮಿಕರರಿಗೆ ಹೊರಡಿಸಿರುವ ಆದೇಶವನ್ನು ನೀರಾವರಿ ಇಲಾಖೆ ನೌಕರರಿಗೆ ಅನ್ವಯಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಶ್ವೇಶ್ವರಯ್ಯ ನಾಲಾ ವಿಭಾಗ ವ್ಯಾಪ್ತಿಯ ಉಪವಿಭಾಗಗಳಲ್ಲಿ ಲಿಪಿಕ ಸಹಾಯಕರು, ಸವಡಿಗಳು, ಚಾಲಕರು 5 ವರ್ಷದಿಂದ 30 ವರ್ಷಗಳವೆಗೆ ದುಡಿಯುತ್ತಿದ್ದು, ಹಲವು ಹೋರಾಟ ನಡೆಸಿದ್ದೇವೆ. ಈ ಸಂಬಂಧ ನೀರಾವರಿ ಇಲಾಖೆ ಅಧೀನ ಕಾರ್ಯದರ್ಶಿ 1996ರ ಜನವರಿಯಲ್ಲಿ ಹೊರಡಿಸಿದ್ದ ಆದೇಶವನ್ನು ಇದುವರೆಗೂ ಜಾರಿಗೊಳಿಸಿಲ್ಲ ಎಂದು ಅವರು ಕಿಡಿಕಾರಿದರು.
ನೌಕರರ ಸೇವೆ ಖಾಯಂಗೆ ಸಂಬಂಧಿಸಿದಂತೆ 2011ರ ಜೂನಲ್ಲಿ ಕಾವೇರಿ ನೀರಾವರಿ ನಿಗಮ ಹೊರಡಿಸಿರುವ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು. ಕಳೆದ ವರ್ಷ ಜುಲೈನಿಂದ ಇಲ್ಲಿವರೆಗಿನ ಬಾಕಿ ವೇತನ ಪಾವತಿಸಬೇಕು. ಪ್ರತಿ ತಿಂಗಳು ವೇತನ ನೀಡಬೇಕು. ಅನಾಹುತವಾದರೆ ಇಲಾಖೆಯೇ ಪರಿಹಾರ ನೀಡಬೇಕು ಮತ್ತು ಯಾವ ಸವಡಿಯನ್ನೂ ಕೆಲಸದಿಂದ ತೆಗೆಯಬಾರದು ಎಂದು ಅವರು ಒತ್ತಾಯಿಸಿದರು.
ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಡಿ.ದೊಡ್ಡಯ್ಯ, ಉಪಾಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಚನ್ನಕೇಶವ, ಸಹ ಕಾರ್ಯದರ್ಶಿ ಮಹೇಶ, ವರುಣಾಕುಮಾರ್, ಜಯಕುಮಾರ್, ಶಶಿಧರ, ಕೆಂಪೇಗೌಡ, ವೆಂಕಟೇಶ್, ದೊಡ್ಡಸ್ವಾಮಿ, ಎಸ್.ಕೆ.ನಾಗರಾಜು, ಶ್ರೀನಿವಾಸ್, ಬೊಮ್ಮೇಗೌಡ, ತಿಮ್ಮೇಗೌಡ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







