ಇಸ್ರೇಲ್ ಪ್ರಧಾನಿ ಮೋದಿಯವರಿಗೆ ನೀಡಲಿದ್ದಾರೆ ‘ವಿಶೇಷ ಜೀಪ್’ ಉಡುಗೊರೆ!
ಇದರ ವಿಶೇಷತೆಯೇನು? ಇಲ್ಲಿದೆ ವಿವರ

ಹೊಸದಿಲ್ಲಿ,ಜ.16: ಭಾರತಕ್ಕೆ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮುದ್ರದ ನೀರಿನಲ್ಲಿಯ ಉಪ್ಪಿನಂಶವನ್ನು ತೆಗೆದು ಅದನ್ನು ಕುಡಿಯಲು ಯೋಗ್ಯವಾಗಿಸುವ ‘ಡಿಸಲೈನೈಜೇಷನ್ ಜೀಪ್’ ಗಾಲ್ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಸಂದರ್ಭ ಮೆಡಿಟರೇನಿಯನ್ ಸಮುದ್ರದ ಓಲ್ಗಾ ಬೀಚ್‌ನಲ್ಲಿ ಉಭಯ ನಾಯಕರು ಸವಾರಿ ಮಾಡಿದ್ದ ಈ ಜೀಪ್ ಈಗಾಗಲೇ ದಿಲ್ಲಿಯನ್ನು ತಲುಪಿದ್ದು, ಅದೀಗ ಗುಜರಾತಿನ ಭುಜ್‌ಗೆ ತೆರಳುವ ಮಾರ್ಗದಲ್ಲಿದೆ ಎಂದು ಮೂಲಗಳು ದೃಢಪಡಿಸಿದವು.
ಜ.17ರಂದು ಭುಜ್‌ನಲ್ಲಿ ಸಮುದ್ರದ ನೀರಿನಿಂದ ಉಪ್ಪಿನಂಶವನ್ನು ನಿವಾರಿಸುವ ಪ್ರಾತ್ಯಕ್ಷಿಕೆಯು ನಡೆಯಲಿದ್ದು, ಉಭಯ ಪ್ರಧಾನಿಗಳು ಐಕ್ರಿಯೇಟ್ ಸೆಂಟರ್‌ನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅದನ್ನು ವೀಕ್ಷಿಸಲಿದ್ದಾರೆ.
ಜೀಪ್ ನಿರ್ಮಾಣಕ್ಕೆ 3,90,000 ಶೆಕೆಲ್(1,11,000 ಅಮೆರಿಕನ್ ಡಾಲರ್) ವೆಚ್ಚವಾಗಿದೆ ಎನ್ನಲಾಗಿದೆ. ಗಾಲ್-ಮೊಬೈಲ್ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರಿನ ಉತ್ಪಾದನೆಗಾಗಿ ರೂಪಿಸಲಾಗಿರುವ ಸ್ವತಂತ್ರ, ಸಮಗ್ರ ಜಲ ಶುದ್ಧೀಕರಣ ವಾಹನವಾಗಿದೆ. ಪ್ರವಾಹ ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳು, ದುರ್ಗಮ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ಸಂದರ್ಭಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಒದಗಿಸಲು ಅದು ಉಪಯುಕ್ತವಾಗಲಿದೆ. ಅದು ದಿನವೊಂದಕ್ಕೆ 20,000 ಲೀ.ನಷ್ಟು ಸಮುದ್ರದ ನೀರನ್ನು ಮತ್ತು 80,000 ಲೀ.ನಷ್ಟು ನದಿಗಳ ರಾಡಿ ಬೆರೆತ ಮಲಿನ ನೀರನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಷ್ಟು ಶುದ್ಧ ನೀರನ್ನಾಗಿ ಪರಿವರ್ತಿಸುತ್ತದೆ.







