ಮುಂಬೈ ಕರಾವಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಮುಂಡ ಪತ್ತೆ?

ಮುಂಬೈ, ಜ.16: ಶನಿವಾರದಂದು ಮುಂಬೈ ಕರಾವಳಿಯ ಸಮುದ್ರಕ್ಕೆ ಅಪ್ಪಳಿಸಿದ್ದ ಪವನ್‌ಹನ್ಸ್ ಹೆಲಿಕಾಪ್ಟರ್‌ನಲ್ಲಿದ್ದವರ ದೇಹಗಳಿಗಾಗಿ ಶೋಧ ನಡೆಸುತ್ತಿರುವ ತಂಡಕ್ಕೆ ತಲೆಯಿಲ್ಲದ ದೇಹವೊಂದು ಸಿಕ್ಕಿದ್ದು ಇದು ಕಾಪ್ಟರ್‌ನ ಪೈಲಟ್‌ನದ್ದಾಗಿರಬಹುದು ಎಂದು ಅನುಮಾನಿಸಲಾಗಿದೆ.
ಈ ದೇಹವು ಯಾರದ್ದು ಎಂಬುದು ಡಿಎನ್‌ಎ ಪರೀಕ್ಷೆಯ ನಂತರವೇ ತಿಳಿಯಲಿದೆ ಎಂದು ಕೂಪರ್ ಮುನಿಸಿಪಲ್ ಜನರಲ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅಪಘಾತದಲ್ಲಿ ನಾಪತ್ತೆಯಾಗಿರುವವರ ಕುಟುಂಬಸ್ಥರ ರಕ್ತದ ಮಾದರಿಗಳನ್ನು ನಾವು ಪಡೆದುಕೊಂಡಿದ್ದು ಅದನ್ನು ವಿಧಿವಿಜ್ಞಾನ ಇಲಾಖೆಯ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ. ಡಿಎನ್‌ಎ ಪರೀಕ್ಷೆಯು ತುಂಬ ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು ಅದರ ಫಲಿತಾಂಶವು ಶನಿವಾರ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಸೋಮವಾರದಂದು ಶೋಧ ತಂಡ ಇನ್ನೊಂದು ಮೃತದೇಹವನ್ನು ಪತ್ತೆ ಮಾಡುವ ಮೂಲಕ ಅಪಘಾತಕ್ಕೀಡಾದ ಕಾಪ್ಟರ್‌ನಲ್ಲಿದ್ದ ಏಳು ವ್ಯಕ್ತಿಗಳ ಪೈಕಿ ಆರು ಜನರ ಮೃತದೇಹವನ್ನು ಸಮುದ್ರದಿಂದ ಹೊರತೆಗೆದಿದೆ. ಶೋಧ ಕಾರ್ಯದಲ್ಲಿ ತೊಡಗಿರುವ ಒಎನ್‌ಜಿಸಿಗೆ ಸೇರಿದ ಹಡಗು ಅಪಘಾತಕ್ಕೀಡಾದ ಕಾಪ್ಟರ್‌ನ ಎರಡು ಇಂಜಿನ್‌ಗಳು, ಬಾಲದ ಗೇರ್ ಬಾಕ್ಸ್, ಮುಖ್ಯ ಗೇರ್ ಬಾಕ್ಸ್ ಸೇರಿದಂತೆ ಹಲವು ಛಿದ್ರಗೊಂಡ ಭಾಗಗಳನ್ನೂ ಸಮುದ್ರದಿಂದ ಮೇಲೆತ್ತಿದೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಮತ್ತು ಪವನ್‌ಹನ್ಸ್‌ನ ಉನ್ನತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಮೃತದೇಹಗಳನ್ನು ಮತ್ತು ಕಾಪ್ಟರ್ ಭಾಗಗಳನ್ನು ಶೀಘ್ರವಾಗಿ ಸಮುದ್ರದಿಂದ ಮೇಲೆತ್ತಲು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶನಿವಾರದಂದು ಐವರು ಒಎನ್‌ಜಿಸಿ ಅಧಿಕಾರಿಗಳು ಮತ್ತು ಇಬ್ಬರು ಪೈಲಟ್‌ಗಳನ್ನು ಹೊತ್ತ ಪವನ್‌ಹನ್ಸ್ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿರುವ ಸಂಸ್ಥೆಯ ತೈಲ ಸ್ಥಾಪನೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು.