30 ಅಡಿ ಆಳದ ಗುಂಡಿಗೆ ಬಿದ್ದ ಆನೆಮರಿಯ ರಕ್ಷಣೆ

ತುಮಕೂರು, ಜ.16: ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದ ಆನೆಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ ಘಟನೆ ಕೃಷ್ಣಗಿರಿ ಜಿಲ್ಲೆಯ ರಾಯಕೋಟೆ ಕೆಲಮಂಗಲ ನಡುವಿನ ಪವಾಡರಪಟ್ಟಿ ಗ್ರಾಮದ ಅರಣ್ಯದಲ್ಲಿ ನಡೆದಿದೆ.
ತಮಿಳುನಾಡಿನ ಕಾಡಾನೆ ಹಿಂಡಿನಲ್ಲಿದ್ದ ಆನೆಮರಿ ಕಾಡಿಗೆ ಹಿಂದಿರುಗುತ್ತಿದ್ದಾಗ ಆಯತಪ್ಪಿ ಹಳ್ಳಕ್ಕೆ ಬಿದ್ದಿತ್ತು. ಇಂದು ರಾಯಕೋಟೆ ಅರಣ್ಯ ಸಿಬ್ಬಂದಿ ಆನೆ ಜಾಡನ್ನು ಪರಿಶೀಲಿಸುತ್ತಿದ್ದ ವೇಳೆ ಹಳ್ಳದಲ್ಲಿ ಆನೆಮರಿ ಪತ್ತೆಯಾಗಿತ್ತು.
30 ಅಡಿಗೂ ಹೆಚ್ಚು ಆಳದಲ್ಲಿದ್ದ ಮರಿಯನ್ನು ಹಗ್ಗದ ಸಹಾಯದಿಂದ ಮೇಲೆತ್ತುವ ಪ್ರಯತ್ನ ವಿಫಲವಾಯಿತು. ಕೊನೆಗೆ ಬಲೆ ಹಾಕಿ ಆನೆ ಮರಿಯನ್ನು ಗ್ರಾಮಸ್ಥರು- ಅರಣ್ಯ ಸಿಬ್ಬಂದಿ ಮೇಲಕ್ಕೆತ್ತಿದರು.
ಸತತ ಮೂರು ಗಂಟೆಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
Next Story





