ಎಟಿಎಂನಲ್ಲಿ ದರೋಡೆಗೆ ಯತ್ನ: ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

ಶಿವಮೊಗ್ಗ, ಜ. 16: ಎಟಿಎಂನಲ್ಲಿ ದರೋಡೆಗೆ ಯತ್ನಿಸಿದ ಗುಂಪೊಂದರ ಮೂವರು ಆರೋಪಿಗಳನ್ನು ಗ್ರಾಮಸ್ಥರೇ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಗರದ ಹೊರವಲಯ ಸಂತೆಕಡೂರು ಗ್ರಾಮದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಎಟಿಎಂ ಕೇಂದ್ರದಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮುಂಜಾನೆ 2.30 ರಿಂದ 3 ಗಂಟೆಯ ವೇಳೆಗೆ ಸುಮಾರು ಐದಾರು ಜನರಿದ್ದ ದರೋಡೆಕೋರರ ತಂಡವು ಸ್ಕಾಪಿರ್ಯೋ ಕಾರೊಂದರಲ್ಲಿ ಆಗಮಿಸಿ ಎಟಿಎಂ ಮೆಷಿನ್‍ನಲ್ಲಿದ್ದ ಹಣ ದೋಚಲು ಮುಂದಾಗಿದೆ. ಇದಕ್ಕೂ ಮುನ್ನ ಗ್ರಾಮದ ಬೀದಿ ದೀಪಗಳನ್ನು ದರೋಡೆಕೋರರು ನಂದಿಸಿದ್ದರು. ಎಟಿಎಂ ಕೇಂದ್ರದಲ್ಲಿದ್ದ ಸಿ.ಸಿ.ಕ್ಯಾಮರಾವನ್ನು ಕೂಡ ಹಾಳುಗೆಡವಿದ್ದರು.
ಎಟಿಎಂ ಕೇಂದ್ರದಿಂದ ಕೇಳಿಬರುತ್ತಿದ್ದ ಸಪ್ಪಳ ಹಾಗೂ ಬೀದಿ ದೀಪಗಳು ನಂದಿ ಹೋಗಿದ್ದರಿಂದ ಅನುಮಾನಗೊಂಡ ಮಳಿಗೆಯ ಮಾಲೀಕರು, ತನ್ನ ಸಂಬಂಧಿಯೋರ್ವರೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಕಳವು ನಡೆಸುತ್ತಿದ್ದುದನ್ನು ಗಮನಕ್ಕೆ ಬಂದಿದೆ. ತಕ್ಷಣವೇ ಮಳಿಗೆಯ ರೋಲಿಂಗ್ ಶೆಟರ್ ಹಾಕಿಕೊಂಡಿದ್ದಾರೆ. ಈ ವೇಳೆ ಹೊರಭಾಗದಲ್ಲಿದ್ದ ಆರೋಪಿಗಳು ಇವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಜನರು ಸ್ಥಳದಲ್ಲಿ ಜಮಾಯಿಸಿದಾಗ ಬೆದರಿದ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತುಂಗಾ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಗಿರೀಶ್ ಮತ್ತವರ ಸಿಬ್ಬಂದಿ ಎಟಿಎಂ ಕೇಂದ್ರದಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಇವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಪರಾರಿಯಾದವರ ಪತ್ತೆಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದಷ್ಟೆ ಈ ಎಟಿಎಂ ಕೇಂದ್ರಕ್ಕೆ ಸುಮಾರು 15 ಲಕ್ಷ ರೂ. ಜಮಾ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದುಕೊಂಡಂತಿದ್ದ ಆರೋಪಿಗಳು, ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ಎಟಿಎಂನಲ್ಲಿ ಕಳವಿಗೆ ಮುಂದಾಗಿರುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರೋಪಿಗಳು ಎಟಿಎಂ ಯಂತ್ರವನ್ನು ಪುಡಿಗಟ್ಟಿದ್ದು, ಆದರೆ ಹಣವಿಟ್ಟಿದ್ದ ಬಾಕ್ಸ್ ತೆರೆಯಲು ಸಾಧ್ಯವಾಗಿಲ್ಲ. ಬಾಕ್ಸ್ ತೆರೆಯಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಎಟಿಎಂ ಕೇಂದ್ರಗಳಿಗೆ ಕಾವಲುಗಾರ ನೇಮಕ ಸೇರಿದಂತೆ ಅಗತ್ಯ ಭದ್ರತಾ ಏರ್ಪಾಡು ಮಾಡುವುದು ಸಂಬಂಧಿಸಿದ ಬ್ಯಾಂಕ್‍ಗಳ ಜವಾಬ್ದಾರಿಯಾಗಿದೆ. ಘಟನೆ ನಡೆದ ಎಟಿಎಂ ಕೇಂದ್ರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಮಾಡಲಾಗಿದೆಯಾದರೂ ಕಾವಲುಗಾರರ ನಿಯೋಜನೆ ಮಾಡಿರಲಿಲ್ಲವೆಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಕೂಡ ಸಂಬಂಧಿಸಿದ ಬ್ಯಾಂಕ್ ಮುಖ್ಯಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.







