ಹಿಂದೂಗಳ ವಿರುದ್ಧ ಹೇಗೆ ಪ್ರಕರಣ ದಾಖಲಿಸಿದಿರಿ ?
ಉ.ಪ್ರ. ಪೊಲೀಸರನ್ನೇ ಬೆದರಿಸಿದ ಬಿಜೆಪಿ ನಾಯಕ

ಮೀರತ್, ಜ. 16: ಕೋಮು ಗಲಭೆಗೆ ಉತ್ತೇಜನ ನೀಡಿದ ಪ್ರಕರಣದಲ್ಲಿ ಹೆಸರು ದಾಖಲಿಸಿದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮೀರತ್‌ನ ಬಿಜೆಪಿಯ ಸ್ಥಳೀಯ ನಾಯಕ ಮೀರತ್‌ನ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಹಾಗೂ ಇತರರ ವಿರುದ್ಧದ ಪ್ರಕರಣವನ್ನು ಹಿಂದೆ ತೆಗೆಯುವಂತೆ ಪೊಲೀಸರಿಗೆ ಬೆದರಿಕೆ ಒಡ್ಡಿರುವುದು ತಡವಾಗಿ ಬಹಿರಂಗವಾಗಿದೆ.
ಕಳೆದ ಶನಿವಾರ ಮೊಬೈಲ್ ಫೋನ್‌ನಲ್ಲಿ ತೆಗೆದ ಈ ವೀಡಿಯೊ ಪಶ್ಚಿಮ ಉತ್ತರಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗೆ ಬಿಜೆಪಿ ನಾಯಕ ಕಪಿಲ್ ದತ್ ಶರ್ಮಾ, ‘‘ಹಿಂದೂಗಳ ವಿರುದ್ಧ ನೀವು ಪ್ರಕರಣ ಹೇಗೆ ದಾಖಲಿಸಿದಿರಿ?’’ ಎಂದು ಕೂಗಾಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಿವರವಾದ ವರದಿಯನ್ನು ಪೊಲೀಸ್ ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ. ವೈಯಕ್ತಿಕವಾಗಿ ಕೂಡ ಹಿರಿಯ ಅಧಿಕಾರಿಗಳಿಗೆ ವರದಿ ರವಾನಿಸಿದ್ದೇವೆ. ಶರ್ಮಾ ಈ ಹಿಂದೆ ಕೂಡ ಇದೇ ರೀತಿ ದುರ್ನಡತೆ ತೋರಿದ್ದಾರೆ ಎಂದು ಮೀರತ್ ಜಿಲ್ಲಾ ಪೊಲೀಸ್ ವರಿಷ್ಠೆ ಮಾಂಝಿ ಸೈನಿ ತಿಳಿಸಿದ್ದಾರೆ.
ಕಪಿಲ್ ದತ್ ಶರ್ಮಾ ಬಿಜೆಪಿಯ ಸ್ಥಳೀಯ ನಾಯಕ. ಈ ಹಿಂದೆ ಅವರು ಪಕ್ಷದ ಸ್ಥಳೀಯ ಘಟಕದ ಸದಸ್ಯರಾಗಿದ್ದರು. ಅವರು ಶನಿವಾರ ಮೀರತ್‌ನಲ್ಲಿರುವ ಪೊಲೀಸ್ ಠಾಣೆಗೆ ತನ್ನ ಬೆಂಬಲಿಗರೊಂದಿಗೆ ಆಗಮಿಸಿ ತನ್ನ ಹಾಗೂ ತನ್ನ ಬೆಂಬಲಿಗರು ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂದೆ ತೆಗೆಯುವಂತೆ ಹಿರಿಯ ಪೊಲೀಸ್ ಅಧಿಕಾರಿ ಮಾನ್ ಸಿಂಗ್ ಚೌಹಾಣ್‌ಗೆ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಉತ್ತರಪ್ರದೇಶದ ಪಟ್ಟಣದಲ್ಲಿ ಕಳೆದ ಗುರುವಾರ ಹಿಂದೂ ಹಾಗೂ ಮುಸ್ಲಿಮರ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂದರ್ಭ ಅಲ್ಲಿಗೆ ತೆರಳಿದ ಶರ್ಮಾ ಹಿಂದೂಗಳ ಪರವಾಗಿ ಮಾತನಾಡಿದ್ದರು. ತನ್ನ ಹಾಗೂ ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿದ್ದರು. ಪ್ರಕರಣ ಹಿಂದೆ ತೆಗೆಯುವಂತೆ ಪೊಲೀಸರಿಗೆ ಬೆದರಿಕೆ ಒಡ್ಡಿದ್ದರು.







