ರಿಪ್ಪನ್‌ಪೇಟೆಯಲ್ಲಿ ಸಂಘಪರಿವಾರದ ಗೂಂಡಾಗಿರಿ: ಗ್ರಾಪಂ ಸದಸ್ಯನ ಮೇಲೆ ಹಲ್ಲೆ
ಐವರ ಬಂಧನ, ಮೂವರಿಗಾಗಿ ಮುಂದುವರಿದ ಶೋಧ

ರಿಪ್ಪನ್‌ಪೇಟೆ, ಜ.16: ಗ್ರಾಪಂ ಸದಸ್ಯನೋರ್ವನಿಗೆ ಸಂಘಪರಿವಾರದ ಕಾರ್ಯಕರ್ತರು ಸೋಮವಾರ ಪಟ್ಟಣದ ನೆಹರೂ ಬಡಾವಣೆಯಲ್ಲಿ ಹಲ್ಲೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಕಿರಣ್, ಮಂಜುನಾಥ, ಸುಧಾಕರ, ದೀಪಕ್, ಪವನ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಎನ್ನಲಾದ, ಬಜರಂಗದಳದ ಸ್ಥಳೀಯ ಘಟಕದ ಅಧ್ಯಕ್ಷ ಕುಷನ್ ದೇವರಾಜ್, ವಿನಯ, ಸಚಿನ್ ಎಂಬವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಕೋಮು ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ: ಗ್ರಾಪಂ ಸದಸ್ಯ ಆಸಿಫ್ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಸೋಮವಾರ ತಡರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಪಿಕ್‌ಅಪ್ ವಾಹನದಲ್ಲಿ ಬೆನ್ನತ್ತಿದ ದುಷ್ಕರ್ಮಿಗಳು ನೆಹರೂ ಬಡಾವಣೆಯ ಮನೆಯ ಹತ್ತಿರ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಗಲಾಟೆಯನ್ನು ಬಿಡಿಸಲು ಬಂದ ತನ್ನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಆಸಿಫ್ ಅವರ ಪತ್ನಿ ರುಖಿಯಾ ದೂರು ದಾಖಲಿಸಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಆಸಿಫ್ ಅವರನ್ನು ಪಟ್ಟಣದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ: ಇತ್ತೀಚೆಗೆ ಪಟ್ಟಣದಲ್ಲಿ ಟಿಪ್ಪುಮತ್ತು ಶಿವಾಜಿ ವಿಷಯವಾಗಿ ಯುವಕರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿರುವ ಬಗ್ಗೆ ಎರಡೂ ಕೋಮಿನ ಯುವಕರ ನಡುವೆ ಹಲ್ಲೆಯಂತಹ ಘಟನೆಗಳು ನಡೆದಿದ್ದವು. ಅಪಹರಣ, ಹಲ್ಲೆ ಹಾಗೂ ಜಾತಿ ನಿಂದನೆ ದೂರಿನನ್ವಯ ಪೊಲೀಸರು ಎರಡೂ ಕೋಮಿನ ಆರೋಪಿಗಳ ವಿರುದ್ಧ ದಾಖಲಿಸಿಕೊಂಡಿದ್ದರು.
ಸ್ಥಳೀಯರ ಪ್ರತಿಭಟನೆ
ಪಟ್ಟಣದಲ್ಲಿ ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಪ್ರಾರ್ಥನಾ ಮಂದಿರದ ಸಮೀಪ ಜಮಾಯಿಸಿ ನ್ಯಾಯ ಕೋರಿ ಧರಣಿಗೆ ಮುಂದಾದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಸಿಪಿಐ ಮಂಜುನಾಥ ಗೌಡ ಹಾಗೂ ಸಿಬ್ಬಂದಿ ಪ್ರತಿಟ ನಾಕಾರರನ್ನು ಚದುರಿಸುವಲ್ಲಿ ಯಶಸ್ವಿಯಾದರು.
ಸ್ಥಳದಲ್ಲಿ ಡಿವೈಎಸ್ಪಿ ಮೊಕ್ಕಾಂ
ಮುಂಜಾಗ್ರತಾ ಕ್ರಮವಾಗಿ ತೀರ್ಥಹಳ್ಳಿ ಡಿವೈಎಸ್ಪಿ ಗಣೇಶ್ ಹೆಗಡೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜಿಸಿ ಪರಿಸ್ಥಿತಿ ಹತೋಟಿಗೆ ತರಲಾಗಿದೆ. ಅಲ್ಲದೆ, ಮಂಗಳವಾರ ಬೆಳಗ್ಗೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.







