ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆಯಿಲ್ಲ: ಬಾರ್ ಕೌನ್ಸಿಲ್

ಹೊಸದಿಲ್ಲಿ, ಜ.16: ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಮತ್ತು ಉನ್ನತ ನ್ಯಾಯಾಂಗವು ಶೀಘ್ರದಲ್ಲೇ ಸಹಜಸ್ಥಿತಿಗೆ ಬರಲಿದೆ ಎಂದು ಭಾರತೀಯ ಬಾರ್ ಕೌನ್ಸಿಲ್ ಮಂಗಳವಾರ ತಿಳಿಸಿದೆ. ಕೆಲದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ಹಿರಿಯ ನಾಲ್ವರು ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಜನವರಿ 12ರಂದು ಪತ್ರಿಕಾಗೋಷ್ಟಿ ಕರೆದಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿರುವ ನ್ಯಾಯಾಧೀಶ ರಂಜನ್ ಗೊಗೊಯ್ ಅವರನ್ನು ಏಳು ಸದಸ್ಯರ ತಂಡವು ಸೋಮವಾರದಂದು ಭೇಟಿಯಾಗಿದ್ದು, ಅವರು ಉನ್ನತ ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಬಾರ್ ಕೌನ್ಸಿಲ್‌ನ ಮುಖ್ಯಸ್ಥರಾಗಿರುವ ಮನನ್ ಮಿಶ್ರ ತಿಳಿಸಿದ್ದಾರೆ.
ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಜೆ. ಚಲಮೇಶ್ವರ್, ರಂಜನ್ ಗೊಗೊಯ್, ಮದನ್ ಬಿ. ಲೊಕೂರ್ ಹಾಗೂ ಕುರಿಯನ್ ಜೋಸೆಫ್ ಭಾರತೀಯ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜನವರಿ 12ರಂದು ಪತ್ರಿಕಾಗೋಷ್ಟಿ ಕರೆಯುವ ಮೂಲಕ ನ್ಯಾಯಾಂಗದಲ್ಲಿ ಕೋಲಾಹಲ ಉಂಟಾಗಿತ್ತು.
ಸದ್ಯ ಕೆಲವು ಮಾಧ್ಯಮಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನೂ ಕೂಡಾ ಸಮಸ್ಯೆ ಬಗೆಹರಿದಿಲ್ಲ ಎಂದು ವರದಿ ಮಾಡುತ್ತಿರುವ ಬಗ್ಗೆ ಆಶ್ಚರ್ಯ ವ್ಯಕ್ತಿಪಡಿಸಿರುವ ಮಿಶ್ರ, ಈ ವಿಷಯವನ್ನು ಮತ್ತಷ್ಟು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅನೌಪಚಾರಿಕವಾಗಿ ಸಭೆ ನಡೆಸಿ ನ್ಯಾಯಾಂಗದಲ್ಲಿ ಎದ್ದಿದ್ದ ಸಮಸ್ಯೆಯನ್ನು ಚಹಾದ ಕಪ್‌ನಲ್ಲಿ ಬಗೆಹರಿಸಲಾಗಿದೆ ಎಂಬ ಅಟರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಿಶ್ರ, ಅವರು ಯಾಕೆ ಹೀಗೆ ಹೇಳಿಕೆ ನೀಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಎಲ್ಲ ನ್ಯಾಯಾಧೀಶರು ತಮ್ಮ ಪೀಠಗಳಲ್ಲಿ ಹಾಜರಿದ್ದು ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲಸಗಳು ಸಹಜವಾಗಿಯೇ ನಡೆಯುತ್ತಿದೆ. ಹಾಗಾಗಿ ಇನ್ನು ಈ ವಿಷಯದಲ್ಲಿ ಯಾವುದೂ ಸಾರ್ವಜನಿಕವಾಗುವುದಿಲ್ಲ ಎಂದು ತಿಳಿಸಿದ್ದಾರೆ.