ಡಾಲರ್‌ನೆದುರು 55 ಪೈಸೆ ಕುಸಿದ ರೂಪಾಯಿ

ಹೊಸದಿಲ್ಲಿ,ಜ.16: ಹೆಚ್ಚುತ್ತಿರುವ ಜಾಗತಿಕ ಕಚ್ಚಾತೈಲ ಬೆಲೆಗಳು ಮತ್ತು ತೀವ್ರಗೊಳ್ಳು ತ್ತಿರುವ ವ್ಯಾಪಾರ ಕೊರತೆಗೆ ಭಾರತೀಯ ರೂಪಾಯಿಯು ದುಬಾರಿ ಬೆಲೆ ತೆರುವಂತಾಗಿದೆ. ಮಂಗಳವಾರ ವಿದೇಶಿ ವಿನಿಮಯ ಮಾರುಕಟ್ಟೆಯು ಭಾರೀ ಏರಿಳಿತಗಳಿಗೆ ಸಾಕ್ಷಿಯಾಗಿದ್ದು, ದಿನದ ಅಂತ್ಯದಲ್ಲಿ ಅಮೆರಿಕದ ಡಾಲರ್‌ನೆದುರು ರೂಪಾಯಿಯು ಕಳೆದೆರಡು ವಾರಗಳಲ್ಲಿಯ ಕನಿಷ್ಠ ಮಟ್ಟವಾದ 64.04ಕ್ಕೆ ಕುಸಿದಿದೆ.
ರೂಪಾಯಿ ಡಾಲರ್‌ನೆದುರು 55 ಪೈಸೆ ಅಥವಾ ಶೇ.0.87ರಷ್ಟು ಕುಸಿದಿದ್ದು, ಇದು ಕಳೆದ ಎಂಟು ತಿಂಗಳುಗಳಲ್ಲಿ ಒಂದೇ ದಿನದಲ್ಲಿಯ ಅತ್ಯಂತ ದೊಡ್ಡ ಕುಸಿತವಾಗಿದೆ.
ಹೆಚ್ಚಿನ ಕಚ್ಚಾತೈಲ ಬೆಲೆ ಮತ್ತು ಚಿನ್ನದ ಆಮದುಗಳಿಂದಾಗಿ ದೇಶದ ವ್ಯಾಪಾರ ಕೊರತೆಯು ಕಳೆದ ಮೂರು ವರ್ಷಗಳ ದಾಖಲೆ ಮಟ್ಟಕ್ಕೆ ತಲುಪಿದ್ದು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕಳವಳ ಸೃಷ್ಟಿಸಿತ್ತು.
ಕಳೆದ ಡಿಸೆಂಬರ್‌ನಲ್ಲಿ ಭಾರತದ ರಫ್ತು ಶೇ.12.36ರಷ್ಟು ಹೆಚ್ಚಳಗೊಂಡು 27.03 ಬಿ.ಡಾ.ಗಳಿಗೆ ತಲುಪಿತ್ತಾದರೂ, ಆಮದು ಪ್ರಮಾಣ ಶೇ.21.12ರಷ್ಟು ಹೆಚ್ಚಳಗೊಂಡು 41.91 ಬಿ.ಡಾ.ಗಳಿಗೆ ಏರಿಕೆಯಾಗುವ ಮೂಲಕ ವ್ಯಾಪಾರ ಕೊರತೆಯನ್ನು 14.88 ಬಿ.ಡಾ.ಗಳಿಗೆ ಹೆಚ್ಚಿಸಿತ್ತು. ಇದು ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಶೇ.41ರಷ್ಟು ಜಿಗಿದಿದೆ.