ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಧರ್ಮನಿಂದನೆಯ ಪೋಸ್ಟ್: ಪ್ರಕರಣ ದಾಖಲು

ಬಂಟ್ವಾಳ,ಜ.16: ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಧರ್ಮನಿಂದನೆಯ ಪೋಸ್ಟ್ ಹಾಕಿರುವ ಆರೋಪದಡಿ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ವ್ಯಕ್ತಿಯೊಬ್ಬರು ಧರ್ಮನಿಂದನೆಯ ಪೋಸ್ಟ್ ಹಾಕಿ, ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಅವರು ಸೋಮವಾರ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದರು. ದೂರು ದಾಖಲಿಸಿಕೊಂಡ ಬಂಟ್ವಾಳ ನಗರ ಠಾಣಾ ಪೊಲೀಸರು ಮೊಬೈಲ್ ನಂಬರ್ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿ ಇಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ದೂರು: "ಮೀಡಿಯಾ ಆ್ಯಂಡ್ ರೈ ಸರ್" ಎಂಬ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳಕಾರಿಯಾದ ಬರಹಗಳನ್ನು ಹಾಕುವ ಮೂಲಕ ಧರ್ಮನಿಂದನೆ ಮಾಡಿದ್ದಾರೆ. ಇದರಿಂದ ಮುಸ್ಲಿಮರ ಭಾವನೆಗೆ ಧಕ್ಕೆ ಉಂಟಾಗಿದೆ. ಈ ಸಂದೇಶವು ಮುಸ್ಲಿಮರ ಬಗ್ಗೆ ಸಮಾಜಕ್ಕೆ ತಪ್ಪು ಕಲ್ಪನೆ ನೀಡಿದಂತಾಗಿದೆ. ಆದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಳಹೇಳಕಾರಿಯಾದ ಹೇಳಿಕೆಗಳನ್ನು ಹಾಕುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಠಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದರು.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.







