ನ್ಯಾಯಕ್ಕಾಗಿ ಕುಟುಂಬ ಸದಸ್ಯರೊಂದಿಗೆ ಧರಣಿ ಕುಳಿತ ಬಿಎಸ್‍ಎಫ್ ಮಾಜಿ ಯೋಧ
ಸೇನೆಯಲ್ಲಿ ಅಕ್ರಮ ಬಯಲಿಗೆಳೆದಿದ್ದಕ್ಕೆ ವಜಾ: ಆರೋಪ

ಶಿವಮೊಗ್ಗ, ಜ.16: ಸೇನೆಯ ಕೆಲ ಹಿರಿಯ ಅಧಿಕಾರಿ, ಸಿಬ್ಬಂದಿಗಳು ನಡೆಸುತ್ತಿದ್ದ ಅಕ್ರಮ ಬಯಲಿಗೆಳೆದಿದ್ದಕ್ಕೆ ತನ್ನನ್ನು ಸೇನೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದವರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ತನ್ನನ್ನು ಸೇನೆಗೆ ನಿಯೋಜನೆ ಮಾಡಿಕೊಂಡಿಲ್ಲ. ನ್ಯಾಯ ಕಲ್ಪಿಸುವ ಕೆಲಸವೂ ಆಗಿಲ್ಲವೆಂದು ಆರೋಪಿಸಿ, ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ಯ ಮಾಜಿ ಯೋಧರೋರ್ವರು ತಮ್ಮ ಕುಟುಂಬ ಸದಸ್ಯರ ಸಮೇತ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಎಸ್.ಮಂಜುನಾಥ್ ಎಂಬವರೇ ಅನಿರ್ದಿಷ್ಟಾವದಿ ಧರಣಿ ಆರಂಭಿಸಿರುವ ಮಾಜಿ ಬಿಎಸ್‍ಎಫ್ ಯೋಧ. ಡಿ.ಸಿ. ಕಚೇರಿ ಆವರಣದಲ್ಲಿ ಧರಣಿ ಆರಂಭಿಸುವುದಕ್ಕೂ ಮುನ್ನ ಕುಟುಂಬ ಸದಸ್ಯರೊಂದಿಗೆ ರಾಷ್ಟ್ರ ಭಾವುಟ ಹಿಡಿದು, ಸೇನಾ ಸಮವಸ್ತ್ರ ಧರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಪತ್ರ ಅರ್ಪಿಸಿದ್ದಾರೆ.
ವಜಾಗೊಳಿಸಿದ್ದರು: ಮೂಲತಃ ಶಿವಮೊಗ್ಗದವರಾದ ನಾನು 2002 ರಲ್ಲಿ ಸೇನೆಯ ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದೆ. 2014 ರ ವರೆಗೂ ಸೇನೆಯಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ. ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿದ್ದ ತಸ್ಕರಿ ಹಾಗೂ ಗೋ ಕಳ್ಳ ಸಾಗಾಣೆ ಕೃತ್ಯಗಳ ವಿರುದ್ದ ಧ್ವನಿಯೆತ್ತಿದ್ದೆ. ಇದರಲ್ಲಿ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದನ್ನು ಪತ್ತೆ ಹಚ್ಚಿದ್ದೆ. ದೇಶದ್ರೋಹ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಪತ್ತೆ ಹಚ್ಚಿದ್ದಕ್ಕೆ ನನಗೆ ಸೇನೆಯಲ್ಲಿ ಮಾನಸಿಕ ಹಿಂಸೆ, ಕಿರುಕುಳ ನೀಡಲಾಯಿತು ಎಂದು ಮಂಜುನಾಥ್‍ರವರು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ದೇಶದ್ರೋಹಿ ಕೃತ್ಯದಲ್ಲಿ ಭಾಗಿಯಾದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ 2009 ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಾಗೂ ಗಡಿ ಭದ್ರತಾ ಪಡೆಯ ಡಿ.ಜಿ.ಯವರಿಗೆ ಮನವಿ ಮಾಡಿಕೊಂಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದಕ್ಕೆ ಬದಲಾಗಿ ನನ್ನನ್ನು ನಿರಂತರವಾಗಿ ಬೇರೆ ಬೇರೆ ಘಟಕಗಳಿಗೆ ವರ್ಗಾವಣೆ ಮಾಡಿ ಹಿಂಸಿಸಲಾಯಿತು. ನಾನು ಮಾಡಿದ್ದ ಆರೋಪದ ಬಗ್ಗೆ ನ್ಯಾಯಯುತ ತನಿಖೆ ನಡೆಸಲಿಲ್ಲ. ಈ ವಿಷಯದ ಕುರಿತಂತೆ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪರ ಗಮನಕ್ಕೂ ತಂದಿದ್ದೆ ಎಂದು ತಿಳಿಸಿದ್ದಾರೆ.
2014 ರಲ್ಲಿ ತಾವು ಪಶ್ಚಿಮ ಬಂಗಾಳದ ನ್ಯೂ ಕುಚ್ ಬಿಹಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ಗಡಿ ಭದ್ರತಾ ಪಡೆಯ ಎಸ್.ಎಸ್.ಎಫ್.ಸಿ. ಕೋರ್ಟ್ ಮೂಲಕ ನನ್ನನ್ನು ಸೇನೆಯಿಂದ ವಜಾಗೊಳಿಸಿದ್ದಾರೆ. ಇದು ಅಕ್ರಮವಾಗಿದೆ. ನನಗೆ ನ್ಯಾಯ ಕಲ್ಪಿಸಬೇಕು. ಮತ್ತೆ ನನ್ನನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಮಂಜುನಾಥ್‍ರವರು ತಿಳಿಸಿದ್ದಾರೆ.
ತನಿಖೆ ನಡೆಸಿಲ್ಲ
ಸೇನೆಯ ಕೆಲ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಕುರಿತಂತೆ ನಾನು ಮಾಡಿದ್ದ ಆರೋಪದ ಬಗ್ಗೆ ಯಾವುದೇ ತನಿಖೆಯನ್ನು ನಡೆಸಿಲ್ಲ. 2014 ರಿಂದ 2018 ರವರೆಗೆ ನಾನು ಬರೆದ ಪತ್ರ ಹಾಗೂ ಮನವಿಗಳಿಗೆ ಯಾವುದೇ ಸ್ಪಂದನೆಯೂ ವ್ಯಕ್ತವಾಗಿಲ್ಲ. ದೇಶ ರಕ್ಷಣೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಕಾರಣಕ್ಕಾಗಿಯೇ ನಾನು ಸೇವೆಯಿಂದ ವಂಚಿತನಾಗುವಂತಾಗಿದೆ' ಎಂದು ಮಾಜಿ ಯೋಧ ಎಸ್.ಮಂಜುನಾಥ್‍ರವರು ಮನವಿ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಡಿಕೆ ಈಡೇರುವವರೆಗೂ ಧರಣಿ
ತನ್ನನ್ನು ಮತ್ತೆ ಸೇನೆಯ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕು. ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಕಲ್ಪಿಸಿಕೊಡಬೇಕು. ಈ ಬಗ್ಗೆ ರಕ್ಷಣಾ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ನಾನು ನಡೆಸುತ್ತಿರುವ ಧರಣಿ ನಿಲ್ಲಿಸುವುದಿಲ್ಲ ಎಂದು ಮಾಜಿ ಯೋಧ ಎಸ್.ಮಂಜುನಾಥ್‍ರವರು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.







