ಔಷಧಿಗೆ ಚೀಟಿ ಬರೆದು ಕೊಡುವ ವೈದ್ಯರ ವಿರುದ್ಧ ಕ್ರಮ: ಸಚಿವ ರಮೇಶ್ ಕುಮಾರ್

ಶಿವಮೊಗ್ಗ, ಜ. 16 : ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಿನಿಂದ ಔಷಧಿ ತರಿಸಲು ಚೀಟಿ ನೀಡುವ ಕೆಟ್ಟ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಔಷಧಿಗಾಗಿ ಚೀಟಿ ಬರೆದು ಕೊಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ಹೊಸನಗರದಲ್ಲಿ ಏಳು ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯಿಂದ 100 ಹಾಸಿಗೆಗೆ ಮೇಲ್ದರ್ಜೆಗೇರಿಸಿದ ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಆಸ್ಪತ್ರೆಗೆಳಲ್ಲಿ ಮುಂದಿನ 15 ದಿನಗಳಲ್ಲಿ ಅಗತ್ಯವಾಗುವ ಔಷಧಿಗಳ ಬಗ್ಗೆ ಒಂದು ತಿಂಗಳು ಮುಂಚಿತವಾಗಿಯೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಔಷಧಿ ಘಟಕಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಔಷಧಿಗಳನ್ನು 48 ಗಂಟೆಗಳ ಒಳಗಾಗಿ ಪೂರೈಕೆ ಮಾಡಲಾಗುತ್ತಿದೆ. ತಮಗೆ ಅಗತ್ಯವಿರುವ ಔಷಧಿಗಳ ಬಗ್ಗೆ ಆಸ್ಪತ್ರೆಗಳು ಸರ್ಕಾರಕ್ಕೆ ಪಟ್ಟಿ ನೀಡಬೇಕೆ ಹೊರತು ವೈದ್ಯರು ರೋಗಿಗಳಿಗೆ ಚೀಟಿ ನೀಡುವುದಲ್ಲ. ಎಲ್ಲಾ 176 ತಾಲೂಕು ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಕೆಪಿಎಂಇ ತಿದ್ದುಪಡಿ ಕಾಯ್ದೆ ಚುನಾವಣೆ ಒಳಗಾಗಿ ಜಾರಿ: ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸೇವೆಯನ್ನು ನಿಯಂತ್ರಿಸುವ ಕೆಪಿಎಂಇ ತಿದ್ದುಪಡಿ ಕಾಯ್ದೆ ಅನುಷ್ಠಾನ ಪ್ರಕ್ರಿಯೆ ಫೆಬ್ರವರಿ 10 ಒಳಗಾಗಿ ಪೂರ್ಣಗೊಂಡು ಚುನಾವಣೆ ಒಳಗಾಗಿ ಜಾರಿಗೆ ಬರಲಿದೆ ಎಂದು ಹೇಳಿದರು.
ಇನ್ನು ಮುಂದೆ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸರ್ಕಾರದಿಂದ ಶುಲ್ಕ ಮರು ಪಾವತಿಸುವ ವ್ಯವಸ್ಥೆಯನ್ನು ಕೊನೆಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೆ ಮಾತ್ರ ಶುಲ್ಕವನ್ನು ಮರು ಪಾವತಿ ಮಾಡಲಾಗುವುದು. ಒಂದು ಸಾವಿರ ಕೋಟಿ ರೂ.ಗಳನ್ನು ಕಳೆದ 10 ವರ್ಷಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ನೀಡಲಾಗಿದೆ ಎಂದರು.
ಡಯಾಲಿಸಿಸ್ ಘಟಕಗಳ ಆರಂಭ: ಫೆಬ್ರವರಿ ಅಂತ್ಯದ ಒಳಗಾಗಿ ಉಚಿತ ಡಯಾಲಿಸಿಸ್ ಘಟಕಗಳನ್ನು ಎಲ್ಲಾ ತಾಲೂಕುಗಳಲ್ಲಿ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಡಯಾಲಿಸಿಸ್ ಘಟಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.
ರಾಜ್ಯದಲ್ಲಿ 54 ವೈದ್ಯಕೀಯ ಕಾಲೇಜುಗಳಿದ್ದು, ದೇಶದಲ್ಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ. ವರ್ಷಕ್ಕೆ ಕನಿಷ್ಟ ಸುಮಾರು 4 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳು ಕಲಿತು ಹೊರ ಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ವೈದ್ಯಕೀಯ ಶಿಕ್ಷಣ ಪೂರೈಸುವ ವೈದ್ಯರು ಗ್ರಾಮೀಣ ಸೇವೆಗೆ ಹಿಂದೇಟು ಹಾಕುತ್ತಿರುವುದು ವಿಷಾದಕರ ಎಂದರು.
ಹೆಚ್ಚುವರಿಯಾಗಿ 150 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಸ್ತರಣಾ ಘಟಕಗಳನ್ನು ರಾಜ್ಯದಲ್ಲಿ ಮಂಜೂರು ಮಾಡಲಾಗಿದೆ. ಪ್ರತಿ 10-15 ಕಿಮಿ ವ್ಯಾಪ್ತಿಯಲ್ಲಿ ಅಂಬ್ಯುಲೆನ್ಸ್ ಸೇವೆ ಲಭ್ಯವಾಗುವಂತಾಗಲು ಮೂಲ ಸೌಕರ್ಯ ಕಲ್ಪಿಸಲು ಈಗಾಗಲೇ ವಿಶ್ವ ಮಟ್ಟದ ಟೆಂಡರ್ ಕರೆಯಲಾಗಿದೆ. ಈ ಅಂಬ್ಯುಲೆನ್ಸ್ ಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ, ತಜ್ಞ ಸಿಬ್ಬಂದಿಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ವೈದ್ಯರ ಕೊರತೆಯನ್ನು ನೀಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯರ ವೇತನವನ್ನು ದುಪ್ಪಟ್ಟುಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆಯನ್ನು ಖಾತ್ರಿಪಡಿಸಲು ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆರೋಗ್ಯ ಇಲಾಖೆಗೆ ಹೊಸ ಕಾಯಕಲ್ಪ ಮಾಡಲಾಗಿದ್ದು, ವೈದ್ಯಕೀಯ ಸೇವೆ ಪ್ರತಿಯೊಬ್ಬರಿಗೂ ಲಭಿಸುವಂತೆ ಮಾಡಲಾಗಿದೆ ಎಂದರು.
ಹೊಸನಗರ ಮುಳುಗಡೆಯಿಂದ ತತ್ತರಿಸಿದ ಊರು. ಇಲ್ಲಿನ ಬಹುತೇಕರು ಮುಳುಗಡೆಯಿಂದ ಸಂತ್ರಸ್ತರಾದವರು. ಇತ್ತೀಚಿನ ವರ್ಷಗಳಲ್ಲಿ ಹೊಸನಗರದಲ್ಲಿ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮೇಲ್ದರ್ಜೆಗೇರಿಸಿದ ಆಸ್ಪತ್ರೆ ಈ ಭಾಗದ ಜನತೆಗೆ ಆಶಾಕಿರಣವಾಗಿದೆ ಎಂದು ಹೇಳಿದರು.
ಹೊಸನಗರದ ಮೆಲ್ದರ್ಜೆಗೇರಿಸಿದ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ, ಒಳರೋಗಿ ವಿಭಾಗ, ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಶಸ್ತ್ರಚಿಕಿತ್ಸಾ ಕೊಠಡಿಗಳು, ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕ, ಡಯಾಲಿಸಿಸ್ ಘಟಕ, ಜೆನರಿಕ್ ಮೆಡಿಸಿನ್ ವಿಭಾಗ, ಸ್ಕ್ಯಾನಿಂಗ್ ವಿಭಾಗ, ಟೆಲಿಮೆಡಿಸಿನ್ ಸೇರಿದಂತೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಬಂಡಿ, ಕಲಗೋಡು ರತ್ನಾಕರ್, ಭಾರತಿ ಪ್ರಭಾಕರ್, ತಾಲೂಕು ಪಂಚಾಯತ್ ಅಧ್ಯಕ್ಷ ವಾಸಪ್ಪ ಗೌಡ್ರು, ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಲುಗದ್ದೆ ಉಮೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.







