ಈ ಮಹಿಳೆಯ ಸಾವಿಗೆ ಕಾರಣ ಯಾರು?

ಡೆಹ್ರಾಡೂನ್, ಜ.17: ನೈನಿತಾಲ್ಗೆ ಪತ್ನಿಯನ್ನು ವಿಹಾರಕ್ಕೆ ಕರೆದೊಯ್ದ ವೈದ್ಯರೊಬ್ಬರು ಇದೀಗ ಪತ್ನಿಯ ಹತ್ಯೆ ಆರೋಪ ಎದುರಿಸುತ್ತಿದ್ದಾರೆ.
ರಸ್ತೆ ಬದಿಯ ಕಟ್ಟೆ ಮೇಲೆ ಕೂತಿದ್ದ ಪತ್ನಿ, ಎದುರಿನಿಂದ ಹಾವನ್ನು ನೋಡಿ ಬೆಚ್ಚಿ ಪ್ರಪಾತಕ್ಕೆ ಬಿದ್ದು, ಮೃತಪಟ್ಟಿದ್ದಾಳೆ ಎಂದು ಪತಿ ಹೇಳಿದ್ದಾರೆ. ಆದರೆ ಪತ್ನಿಯ ತವರುಮನೆಯವರ ಪ್ರಕಾರ ಇದು ವ್ಯವಸ್ಥಿತ ಕೊಲೆ. ಕೊಲೆಗೆ ನಿಜವಾಗಿ ಕಾರಣ ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಮೊದಲು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ನೈನಿತಾಲ್ ಪೊಲೀಸರು ಇದೀಗ ಸಾವಿಗೀಡಾದ ಮಹಿಳೆ ತಮನ್ನಾ ಖಾನ್ ಅವರ ತಂದೆ-ತಾಯಿ ನೀಡಿದ ದೂರಿನ ಮೇರೆಗೆ ಪತಿ ಸದ್ದಾಂ ಹುಸೈನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ 304-ಬಿ ಸೆಕ್ಷನ್ ಅನ್ವಯ ವರದಕ್ಷಿಣೆ ಸಾವು ಪ್ರಕರಣ ದಾಖಲಿಸಲಾಗಿದೆ.
ಸತ್ತಲ್ ಮಾರ್ಗದಲ್ಲಿ ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಪತ್ನಿ ತಮನ್ನಾಗೆ ವಾಕರಿಕೆ ಬಂದು ಕಾರಿನಿಂದ ಇಳಿದಳು. ರಸ್ತೆಬದಿಯ ಕಟ್ಟೆಯಲ್ಲಿ ಕುಳಿತು ವಾಂತಿ ಮಾಡುತ್ತಿದ್ದಾಗ ಹಾವನ್ನು ನೋಡಿ ಬೆದರಿದಳು. ಆಗ 200 ಅಡಿ ಆಳಕ್ಕೆ ಬಿದ್ದು, ಮೃತಪಟ್ಟಳು ಎನ್ನುವುದು ಸದ್ದಾಂ ಹೇಳಿಕೆ. ತಕ್ಷಣ ಕೂಗಿಕೊಂಡಾಗ ಸ್ಥಳೀಯರು ಮತ್ತು ಕಾರು ಚಾಳಕ ಕಿಶನ್ ಸಿಂಗ್ ತಮನ್ನಾಳನ್ನು ರಕ್ಷಿಸಲು ಮುಂದಾದರು. ತೀವ್ರ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಬಿ.ಡಿ.ಪಾಂಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ವೇಳೆ ಆಕೆ ಮೃತಪಟ್ಟಳು ಎಂದು ಹೇಳಿಕೆ ನೀಡಿದ್ದಾರೆ. ಈ ದಂಪತಿ ಜನವರಿ 13ರಂದು ನೈನಿತಾಲ್ಗೆ ಆಗಮಿಸಿದ್ದರು.