ದಲಿತ ಯುವಕನಿಗೆ ಬಡಿಗೆಯಿಂದ ಥಳಿಸಿ ‘ಜೈ ಮಾತಾ ದಿ’ ಎಂದು ಹೇಳಿಸಿದರು
ಉತ್ತರಪ್ರದೇಶದಲ್ಲಿ ಅಮಾನವೀಯ ಘಟನೆ

ನೊಯ್ಡ(ಉ.ಪ್ರ.), ಜ.17: ದೇವರಿಗೆ ನಿಂದನೆ ಮಾಡಿದ್ದಾನೆಂಬ ಕಾರಣಕ್ಕೆ ದಲಿತ ಯುವಕನಿಗೆ ಮೂವರು ದುರುಳರು ಸೇರಿಕೊಂಡು ಬಡಿಗೆಯಿಂದ ನಿರ್ದಯವಾಗಿ ಥಳಿಸಿದ್ದಲ್ಲದೆ, ‘ಜೈ ಮಾತಾ ದಿ’ ಎಂದು ಪಠಣ ಮಾಡುವಂತೆ ಬಲವಂತಪಡಿಸಿರುವ ಅಮಾನವೀಯ ಘಟನೆಯು ಉತ್ತರಪ್ರದೇಶದ ಮುಝಾಫರ್ನಗರದಲ್ಲಿ ನಡೆದಿದೆ.
ದಲಿತ ಯುವಕನಿಗೆ ಮೂವರು ದುಷ್ಕರ್ಮಿಗಳು ಥಳಿಸುತ್ತಿರುವ ದೃಶ್ಯವನ್ನು ಮತ್ತೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮುಝಾಫರ್ನಗರದ ನಿವಾಸಿ 27ರ ಹರೆಯದ ದಲಿತ ಯುವಕ ಥಳಿತಕ್ಕೊಳಗಾಗಿದ್ದು, ಆರೋಪಿಗಳ ವಿರುದ್ದ ಕಠಿಣ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅನಂತ್ ದೆವೋ ಹೇಳಿದ್ದಾರೆ.
‘‘ನಾವು ಥಳಿತಕ್ಕೊಳಗಾದ ಯುವಕ ಹಾಗೂ ಆತನ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇವೆ. ನಾಲ್ವರು ಆರೋಪಿಗಳನ್ನು ಅದೇ ಪ್ರದೇಶದ ಮೇಲ್ಜಾತಿಯ ಯುವಕರು ಎಂದು ಗುರುತಿಸಲಾಗಿದೆ. ಘಟನೆಯು ಪುರ್ಕಝಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ’’ ಎಂದು ಎಸ್ಪಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ಮುಖಕ್ಕೆ ಕಪ್ಪು ಹೆಲ್ಮೆಟ್ ಹಾಕಿದ್ದ ಯುವಕನನ್ನು ನೆಲಕ್ಕುರುಳಿಸಿರುವ ಮೂವರು ದುಷ್ಕರ್ಮಿಗಳು ಚೆನ್ನಾಗಿ ಥಳಿಸುವ ದೃಶ್ಯವಿದೆ. ಈ ದೃಶ್ಯವನ್ನು ಮತ್ತೊಬ್ಬ ಸೆರೆ ಹಿಡಿದಿದ್ದಾನೆ. ಒಂದು ಹಂತದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಕೈಯನ್ನು ತಿರುಚಲಾಗಿತ್ತು. ಆತನ ಹೆಲ್ಮೆಟ್ ಕಳಚಿ ಬಿದ್ದಿತ್ತು. ದಲಿತ ಯುವಕನಲ್ಲಿ ‘ಜೈ ಮಾತಾ ದಿ’ ಎಂದು ಪಠಣೆ ಮಾಡುವಂತೆ ಬಲವಂತಪಡಿಸುವ ದೃಶ್ಯ ವಿಡಿಯೋದಲ್ಲಿದೆ.