ಭಾರತೀಯ ಯಹೂದಿಗಳತ್ತ ಕೈಬೀಸದೇ ಮುಂದಕ್ಕೆ ಸಾಗಿದ ಮೋದಿ, ನೆತನ್ಯಾಹು

ಅಹ್ಮದಾಬಾದ್,ಜ.17 : ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಇಂದು ಬೆಳಗ್ಗೆ ಸಾಬರಮತಿ ಆಶ್ರಮಕ್ಕೆ ಆಗಮಿಸುವ ಸಂದರ್ಭ ದಾರಿ ಮಧ್ಯೆ ಅವರಿಗಾಗಿ ಬೆಳಗ್ಗಿನಿಂದ ನಿಂತಿದ್ದ ನಗರದ ಯಹೂದಿ ಸಮುದಾಯದ 50 ಸದಸ್ಯರಿಗೆ ನಿರಾಸೆಯೇ ಕಾದಿತ್ತು. ಇಬ್ಬರು ರಾಷ್ಟ್ರ ನಾಯಕರು ಅವರತ್ತ ಕೈಬೀಸದೇ ಮುಂದಕ್ಕೆ ಸಾಗಿದ್ದರಲ್ಲದೆ ಈ ನಾಯಕರ ವಾಹನ ಹಾದು ಹೋಗಿದ್ದೂ ಇವರಿಗೆ ತಿಳಿದೇ ಇರಲಿಲ್ಲ.
ಯಹೂದಿಗಳು ಅಲ್ಲಿಗೆ ಬೆಳಿಗ್ಗೆ 8 ಗಂಟೆಗೆ ಆಗಮಿಸಿದ್ದು ಹಲವಾರು ಯುವಕರೂ ಇದ್ದರಲ್ಲದೆ ಇಬ್ಬರು ಪ್ರಧಾನಿಗಳೂ ತಮ್ಮ ಬಳಿ ಬಂದು ಮಾತನಾಡಿದಾಗ ಒಂದು ಸ್ವಾಗತ ಗೀತೆಯನ್ನು ಹಾಡಲೂ ಕೆಲವರು ಸಿದ್ಧತೆ ಮಾಡಿಕೊಂಡಿದ್ದರೆ ಇನ್ನು ಕೆಲವರು ಕೈಗಳಲ್ಲಿ ಹೂಗುಚ್ಛ ಹಿಡಿದುಕೊಂಡಿದ್ದರು. ಕನಿಷ್ಠ ಪ್ರಧಾನಿಗಳ ವಾಹನ ತಮ್ಮ ಪಕ್ಕ ಹಾದು ಹೋಗುವಾಗ ನಿಧಾನಗತಿಯಲ್ಲಿ ಸಾಗಬಹುದೆಂಬ ಅವರ ನಿರೀಕ್ಷೆಯೂ ಹುಸಿಯಾಗಿದೆ. ಪ್ರಧಾನಿಗಳನ್ನು ಎದುರುಗೊಳ್ಳುವಾಗ ಧರಿಸಲೆಂದೇ ಕೆಲವು ಯಹೂದಿಗಳು ಹೊಸ ಕಿಪ್ಪಾಹ್ ಅಥವಾ ಟೋಪಿಗಳನ್ನೂ ಖರೀದಿಸಿದ್ದರು.