ಎನ್‌ಪಿಎಸ್ ಯೋಜನೆ ರದ್ದುಪಡಿಸಲು ಒತ್ತಾಯಿಸಿ ಜ.20 ರಂದು ಫ್ರೀಡಂ ಪಾರ್ಕ್ ಚಲೋ
ಬೆಂಗಳೂರು, ಜ. 17: ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಜ. 20 ರಂದು ಫ್ರೀಡಂ ಪಾರ್ಕ್ ಚಲೋ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಮುಂದಾಗಿದೆ.
ಬುಧವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಾಂತರಾಮ್, ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ನೂತನ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ. ಹೀಗಾಗಿ, ಇದನ್ನು ರದ್ದು ಮಾಡಬೇಕು ಎಂದು ಹಲವು ಸಲ ಧರಣಿ ಮಾಡಿ ಹತ್ತಾರು ಮನವಿ ಪತ್ರಗಳನ್ನು ಸಲ್ಲಿಸಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಸರಕಾರಿ ಸೇವೆಗೆ ಸೇರಿ ಅಕಾಲಿಕ ಮರಣಕ್ಕೀಡಾದ ನೌಕರರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಲ್ಲಿ ಈ ಯೋಜನೆ ವಿಫಲವಾಗಿದೆ. ಅಲ್ಲದೆ, ಇದರಿಂದಾಗಿ ಅನೇಕರಿಗೆ ಅನ್ಯಾಯವಾಗಲಿದೆ. ಹೀಗಾಗಿ, ಈ ಯೋಜನೆ ರದ್ದು ಮಾಡಬೇಕು. ಹಳೇ ಯೋಜನೆ ಅಡಿಯಲ್ಲಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಹೊಸ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶದಿಂದ ವೇತನದ ಶೇ. 10 ರಷ್ಟನ್ನು ಕಡಿತಗೊಳಿಸಲಾಗುತ್ತಿದೆ. ಅದಕ್ಕೆ ಸಮನಾದ ಶೇ. 10 ರಷ್ಟು ಮೊತ್ತವನ್ನು ವಂತಿಕೆ ರೂಪದಲ್ಲಿ ಸರಕಾರ ನೀಡುತ್ತದೆ. ಈ ರೀತಿ ಶೇಖರಣೆಯಾಗುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳು ಪಡೆದು ಷೇರುಪೇಟೆಯಲ್ಲಿ ತೊಡಗಿಸುತ್ತವೆ. ನಂತರ ಅದರಿಂದ ಬಂದ ಲಾಭದಲ್ಲಿ ಕಂಪೆನಿಗಳು ನೌಕರರಿಗೆ ಪಿಂಚಣಿ ನೀಡುತ್ತವೆ. ಈ ಯೋಜನೆಯಲ್ಲಿ ಎನ್‌ಪಿಎಸ್ ಹಾಗೂ ಒಪಿಎಸ್ ಗುಂಪುಗಳನ್ನಾಗಿ ವಿಂಗಡಿಸುವ ಮೂಲಕ ನೌಕರರ ನಡುವೆ ತಾರತಮ್ಯ ಸೃಷ್ಟಿಸಲಾಗಿದೆ ಎಂದು ಹೇಳಿದರು.
ನೌಕರರ ಹಣ ಭದ್ರತೆಯ ನಿಟ್ಟಿನಲ್ಲಿ ಯಾವುದೇ ಭರವಸೆ ಒದಗಿಸಿಲ್ಲ. ಸಾಮಾನ್ಯ ಭವಿಷ್ಯ ನಿಧಿಯಲ್ಲಿ ಉಳಿತಾಯ ಮಾಡಲು ಅವಕಾಶ ನೀಡಿಲ್ಲ. ಸಾಮಾಜಿಕ ಅಗತ್ಯಕ್ಕನುಗುಣವಾಗಿ ಹಣ ಹಿಂಪಡೆಯಲು ಅವಕಾಶವಿಲ್ಲ. ಕುಟುಂಬ ಪಿಂಚಣಿ ಸೌಲಭ್ಯವೂ ಇಲ್ಲ. ಹೀಗಾಗಿ, ಇದನ್ನು ರದ್ದುಪಡಿಸಬೇಕು. ರಾಜ್ಯ ಸರಕಾರಿ ನೌಕರರನ್ನು ಪ್ರತಿನಿಧಿಸುವ ಸಂಘಟನೆಗಳು ಯೋಜನೆಯ ಸಂಕೀರ್ಣ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಸರಕಾರಿ ಎನ್‌ಪಿಎಸ್ ನೌಕರರು ಸಾಮೂಹಿಕ ನಾಯಕತ್ವದಡಿ ಈ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ ಸೇರಿದಂತೆ ಪ್ರಮುಖರಿದ್ದರು.







