ರಾಜಕೀಯ ಸಭೆಯಲ್ಲಿ ದೋವಲ್ ಉಪಸ್ಥಿತಿ ನಿರಾಕರಿಸಿದ ಸರಕಾರ

ಹೊಸದಿಲ್ಲಿ,ಜ.17: ಗೃಹಸಚಿವರ ನಿವಾಸದಲ್ಲಿ ರಾಜಕೀಯ ಸಭೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಉಪಸ್ಥಿತಿಯ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯವು ಬುಧವಾರ ತಿರಸ್ಕರಿಸಿದೆ. ದಿಲ್ಲಿಯಲ್ಲಿ ಬಿಜೆಪಿಯು ಇತ್ತೀಚಿಗೆ ನಡೆಸಿದ್ದ ರಾಜಕೀಯ ಕಾರ್ಯತಂತ್ರ ಸಭೆಯಲ್ಲಿ ದೋವಲ್ ಅವರು ಉಪಸ್ಥಿತರಿದ್ದ ಬಗ್ಗೆ ವಿಚಾರಣೆಗೆ ಆದೇಶಿಸುವಂತೆ ಸಿಪಿಎಂ ತ್ರಿಪುರಾ ರಾಜ್ಯ ಘಟಕವು ಮಂಗಳವಾರ ಚುನಾವಣಾ ಆಯೋಗವನ್ನು ಆಗ್ರಹಿಸಿತ್ತು.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಪುನರ್‌ಪರಿಶೀಲಿಸಲು ಗೃಹಸಚಿವರು ನಿಯಮಿತವಾಗಿ ಬೆಳಗಿನ ಸಭೆಗಳನ್ನು ನಡೆಸುವುದು ವಾಡಿಕೆ. ಈ ಸಭೆಯಲ್ಲಿ ಆಂತರಿಕ ಭದ್ರತೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಾರೆ. ವಾಡಿಕೆಯಂತೆ ಜ.14ರಂದು ಗೃಹಸಚಿವರ ನಿವಾಸದಲ್ಲಿ ಇಂತಹ ಸಭೆಯೊಂದು ನಡೆದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಸೇರಿದಂತೆ ತಂಡದ ಸದಸ್ಯರು ಹಾಜರಿದ್ದರು. ಈ ಅಧಿಕಾರಿಗಳು ಅಂದು ಗೃಹಸಚಿವರ ನಿವಾಸದಲ್ಲಿ ಬೇರೆ ಯಾವುದೇ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.