ಅನಂತ್ ಕುಮಾರ್ ಹೆಗಡೆಯನ್ನು ‘ಹುಚ್ಚಾಸ್ಪತ್ರೆ’ ಬಸ್ ಹತ್ತಿಸಬೇಕು: ಸಚಿವ ಎಚ್.ಎಂ. ರೇವಣ್ಣ
ಬೆಂಗಳೂರು, ಜ. 17: ಸಾಹಿತ್ಯ-ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುವ ಮೂಲಕ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಹೆಗ್ಗಳಿಕೆ ನಮ್ಮ ಸಾಹಿತಿಗಳದ್ದು. ಆದರೆ, ಅಂತಹ ಸಾಹಿತ್ಯ ದಿಗ್ಗಜರ ಬಗ್ಗೆ ಹಗುರವಾಗಿ ಹೇಳಿಕೆ ನೀಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯನ್ನು ರೂಟ್ ನಂಬರ್-4(ನಿಮ್ಹಾನ್ಸ್ ಆಸ್ಪತ್ರೆ) ಮಾರ್ಗದ ಬಸ್ ಹತ್ತಿಸಬೇಕೆಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಟೀಕಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಸುಮ್ಮನಿದ್ದ ಹೆಗಡೆ, ಪುನಃ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ. ಅವರನ್ನು ರೂಟ್ ನಂಬರ್ 4 ಬಸ್ಸನ್ನು ಹತ್ತಿಸದೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದರು.
ಕುವೆಂಪು, ಜಿ.ಎಸ್.ಶಿವರುದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡ ಭಾಷೆ, ಸಂಸ್ಕೃತಿಗೆ ರಾಷ್ಟ್ರ ಮಟ್ಟದಲ್ಲಿ ಕೀರ್ತಿ, ಹೆಮ್ಮೆ ತಂದುಕೊಟ್ಟಿದ್ದಾರೆ. ದೇಶದ ಯಾವುದೇ ರಾಜ್ಯ ಭಾಷೆಗೆ ಇಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳು ಬಂದಿಲ್ಲ ಎಂದ ಅವರು, ಅನಂತ ಕುಮಾರ್ ಹೆಗಡೆ ಇಂತಹ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.







