ಟ್ರಂಪ್ ಮಾನಸಿಕ ಆರೋಗ್ಯ ಸ್ಥಿತಿ ಅತ್ಯುತ್ತಮ
ಅಮೆರಿಕದ ಅಧ್ಯಕ್ಷೀಯ ವೈದ್ಯರ ಪ್ರಮಾಣಪತ್ರ

ವಾಶಿಂಗ್ಟನ್, ಜ. 17: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯುತ್ತಮವಾಗಿದೆ ಎಂದು ಅಧ್ಯಕ್ಷರ ವೈದ್ಯರು ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಮಯದ ಅವಧಿಯಲ್ಲಿನ ಅವರ ಅನಾರೋಗ್ಯಕರ ಆಹಾರ ವಿಧಾನ ಮತ್ತು ನಿರಂತರ ವ್ಯಾಯಾಮ ಕೊರತೆಯ ಹಿನ್ನೆಲೆಯಲ್ಲಿ ಅವರ ಕೊಲೆಸ್ಟ್ರಾರಾಲ್ ಮಟ್ಟ ಮತ್ತು ಬೊಜ್ಜು ಪ್ರಮಾಣದಲ್ಲಿ ಏರಿಕೆಯಾಗಿರುವ ಹೊರತಾಗಿಯೂ ವೈದ್ಯರ ಈ ಪ್ರಮಾಣಪತ್ರ ಲಭಿಸಿದೆ.
‘‘ಮಾನಸಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅಧ್ಯಕ್ಷರಿಗೆ ಪರಿಪೂರ್ಣ ಅಂಕಗಳು ಲಭಿಸಿವೆ. ಅವರು ಕರ್ತವ್ಯಕ್ಕೆ ಸಮರ್ಥರಾಗಿದ್ದಾರೆ. ತನ್ನ ಪ್ರಸಕ್ತ ಅಧಿಕಾರಾವಧಿಯ ಉಳಿದ ಅವಧಿಗೆ ಹಾಗೂ ಆಯ್ಕೆಯಾದರೆ ಇನ್ನೊಂದು ಅವಧಿಗೂ ಅವರು ಸಮರ್ಥರಾಗಿರುತ್ತಾರೆ’’ ಎಂದು ಅಮೆರಿಕ ನೌಕಾಪಡೆಯಲ್ಲಿ ರಿಯರ್ ಅಡ್ಮಿರಲ್ ಆಗಿರುವ ಅಧ್ಯಕ್ಷೀಯ ವೈದ್ಯ ರಾನಿ ಜಾಕ್ಸನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಟ್ರಂಪ್‌ರ ಮಾನಸಿಕ ಆರೋಗ್ಯದ ಬಗ್ಗೆ ಹಿಂದಿನಿಂದಲೂ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಪುಸ್ತಕವೊಂದು ಟ್ರಂಪ್‌ರ ಮಾನಸಿಕ ಸ್ಥಿತಿ ಬಗ್ಗೆ ಹೊಸ ವಿಷಯಗಳನ್ನು ಎತ್ತಿದ ಬಳಿಕ ಜನರ ಗಮನ ಮತ್ತೆ ಅವರ ಮಾನಸಿಕ ಸ್ಥಿತಿಯತ್ತ ಹರಿದಿತ್ತು.
ಟ್ರಂಪ್ ಹೇಳಿದ್ದನ್ನೇ ಹೇಳುತ್ತಾರೆ ಹಾಗೂ ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದಾಗಿ ಪುಸ್ತಕವು ಹೇಳಿತ್ತು.
ಆದರೆ, ಈ ಅಭಿಪ್ರಾಯಗಳನ್ನು ನಿರಾಕರಿಸಿರುವ ಟ್ರಂಪ್, ತನ್ನನ್ನು ತಾನು ‘ಅತ್ಯಂತ ಸ್ಥಿರ ಮೇಧಾವಿ (ವೆರಿ ಸ್ಟೇಬಲ್ ಜೀನಿಯಸ್)’ ಎಂಬುದಾಗಿ ಕರೆದುಕೊಂಡಿದ್ದರು.
ಆರೋಗ್ಯ ತಪಾಸಣಾ ಶಿಷ್ಟಾಚಾರ ಅಥವಾ ಶಿಫಾರಸ್ಸಿನ ಪ್ರಕಾರ ಅಗತ್ಯವಿಲ್ಲದಿದ್ದರೂ, ಇತ್ತೀಚೆಗೆ ಟೀಕಾಕಾರರು ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್‌ರ ಸೂಚನೆಯಂತೆ ಈ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ ಎಂದು ಜಾಕ್ಸನ್ ಹೇಳಿದರು.







