ರಖೈನ್‌ನಲ್ಲಿ ಬೌದ್ಧರ ಹಿಂಸಾಚಾರ: ಪೊಲೀಸ್ ಗೋಲಿಬಾರ್‌ಗೆ 7 ಬಲಿ

ಯಾಂಗನ್ (ಮ್ಯಾನ್ಮಾರ್), ಜ. 17: ಮಂಗಳವಾರ ರಾತ್ರಿ ಸರಕಾರಿ ಕಚೇರಿಯೊಂದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಉದ್ರಿಕ್ತ ರಖೈನ್ ಬೌದ್ಧರ ಗುಂಪೊಂದರ ಮೇಲೆ ಮ್ಯಾನ್ಮಾರ್ ಪೊಲೀಸರು ಗೋಲಿಬಾರ್ ನಡೆಸಿದಾಗ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಖೈನ್ ರಾಜ್ಯದ ವ್ರೌಕ್ ಯು ನಲ್ಲಿರುವ ಪ್ರಾಚೀನ ದೇವಾಲಯವೊಂದರ ಆವರಣದಲ್ಲಿ ಹಲವು ಸಾವಿರ ಬೌದ್ಧ ಪ್ರತಿಭಟನಕಾರರು ನೆರೆದಿದ್ದರು.
ರಖೈನ್ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮ್ ಸಮುದಾಯದ ವಿರುದ್ಧ ಸೇನೆ ಇತ್ತೀಚೆಗೆ ನಡೆಸಿದ ದಮನ ಕಾರ್ಯಾಚರಣೆಯ ಬಳಿಕವೂ ಈ ದೇವಾಲಯ ಭದ್ರವಾಗಿದೆ.
ಪ್ರತಿಭಟನಾನಿರತರು ಯಾಕೆ ಹಿಂಸಾಚಾರಕ್ಕೆ ಇಳಿದರು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಆದರೆ, ಸುಮಾರು 6.55 ಲಕ್ಷ ರೊಹಿಂಗ್ಯಾ ನಿರಾಶ್ರಿತರನ್ನು ಬಾಂಗ್ಲಾದೇಶದ ಶಿಬಿರಗಳಿಂದ ವಾಪಸ್ ಕರೆಸಿಕೊಳ್ಳಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳು ಸಹಿ ಹಾಕಿದ ದಿನದಂದೇ ಹಿಂಸಾಚಾರ ಸಂಭವಿಸಿದೆ.
ಉದ್ರಿಕ್ತ ಗುಂಪೊಂದು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ರಖೈನ್ ಸರಕಾರಿ ಧ್ವಜವನ್ನು ಹಾರಿಸಿದ ಬಳಿಕ ಹಿಂಸಾಚಾರ ಕಾಣಿಸಿಕೊಂಡಿತು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.







