ನಿವೇಶನ ಆಯ್ಕೆಯಲ್ಲಿ ಅನ್ಯಾಯ: ದಸಂಸ ಆರೋಪ
ಮಂಗಳೂರು, ಜ.17: ಮನೆ ನಿವೇಶನದ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಮನಪಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕಾನೂನುಬದ್ಧ ಪ್ರಮಾಣದಲ್ಲಿ ನೀಡದೆ ವಂಚಿಸಿದೆ ಎಂದು ದಲಿತ ಹಕ್ಕುಗಳ ಸಮಿತಿ ಆರೋಪಿಸಿದೆ.
ನಗರ ಸಮಿತಿಯ ಅಧ್ಯಕ್ಷ ಲಿಂಗಪ್ಪನಂತೂರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ದಲಿತ ಸಮುದಾಯದ ಫಲಾನುಭವಿ ಗಳ ಪೈಕಿ ಕೇವಲ ಶೇ. 8 ಮಾತ್ರ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಆಡಳಿತ ಪಕ್ಷದ ಬೆಂಬಲಿಗರನ್ನು ಮಾತ್ರ ಗುರುತಿಸಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆಗಳಲ್ಲಿ ಫಲವತ್ತಾದ ಕೃಷಿ ಭೂಮಿ ಹೊಂದಿರುವವರನ್ನು ಮತ್ತು ಆರ್ಥಿಕವಾಗಿ ಸದೃಢವಾಗಿರುವವರನ್ನು ಆಯ್ಕೆ ಮಾಡಲಾಗಿದೆ. ಬಡ ದಲಿತ ಕುಟುಂಬಗಳನ್ನು ಪರಿಗಣಿಸಿರುವುದಲ್ಲ ಎಂದು ಸಮಿತಿ ಆರೋಪಿಸಿದೆ.
ಮನಪಾ ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನಿಗದಿತ ಪ್ರಮಾಣದಲ್ಲಿ ಮನೆ ನಿವೇಶನ ನೀಡದಿದ್ದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸುವುದು ಎಂದು ಸಮಿತಿ ಎಚ್ಚರಿಸಿದೆ.
ಸಭೆಯಲ್ಲಿ ಜಿಲ್ಲಾ ಸಮಿತಿಯ ನಾಯಕರಾದ ತಿಮ್ಮಯ್ಯ, ಕಿಶೋರ್ ಪೊರ್ಕೋಡಿ, ಕೃಷ್ಣ ತಣ್ಣೀರುಬಾವಿ, ರಘುವೀರ್, ನಾಗೇಂದ್ರ ಉಪಸ್ಥಿತರಿದ್ದರು. ನಗರ ಕಾರ್ಯದರ್ಶಿ ಪ್ರಶಾಂತ್ ಎಂ.ಬಿ. ಸ್ವಾಗತಿಸಿದರು.





