ಎಚ್‌ಡಿಕೆ ಆರೋಪ ರಾಜಕೀಯ ಪ್ರೇರಿತ: ಸಚಿವ ವಿನಯ ಕುಲಕರ್ಣಿ
ಬೆಂಗಳೂರು, ಜ. 17: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸರಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್(ಎಂಎಂಎಲ್) ಅಕ್ರಮ ಗಣಿಗಾರಿಕೆ ನಡೆಸಿದೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ರಾಜಕೀಯ ಪ್ರೇರಿತ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಂಡೂರಿನ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ ಎರಡು ಕಂಪೆನಿಗಳು ವಾರ್ಷಿಕ 40 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ತೆಗೆಯುವ ಗುರಿ ನೀಡಲಾಗಿದೆ. ಮೂರು ವರ್ಷಗಳಲ್ಲಿ 60ಲಕ್ಷ ಮೆಟ್ರಿಕ್ ಟನ್ ಅದಿರು ತೆಗೆಯಲಾಗಿದೆ.
ಆದರೆ, ಕುಮಾರಸ್ವಾಮಿ 1.80 ಲಕ್ಷ ಮೆಟ್ರಿಕ್ ಟನ್ ಅದಿರು ಹೊರ ತೆಗೆಯಲಾಗಿದೆ ಎಂಬ ಆರೋಪ ಮಾಡಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿಗದಿತ ಪ್ರಮಾಣದ ಅದಿರು ಹೊರ ತೆಗೆಯದ ಕಾರಣ ಎಪ್ರಿಲ್‌ನಲ್ಲೆ ಎಂಎಂಎಲ್‌ಗೆ ಪತ್ರ ಬರೆದು ದಂಡ ವಿಧಿಸಲು ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಣೆ ನೀಡಿದರು.
ನನ್ನ ಪತ್ರದ ಮೇಲೆ ಆಂತರಿಕ ತನಿಖೆ ನಡೆದು ಒಂದು ವರದಿ ಸಲ್ಲಿಸಲಾಗಿದೆ. ಆ ವರದಿಯನ್ನಿಟ್ಟುಕೊಂಡೆ ಎಚ್‌ಡಿಕೆ ಆರೋಪ ಮಾಡಿದ್ದು, ಇದರಲ್ಲಿ ಸತ್ಯಾಂಶವಿಲ್ಲ. ಗುತ್ತಿಗೆದಾರರು ದಂಡ ವಿಧಿಸುವುದನ್ನು ತಪ್ಪಿಸಲು ಕಚ್ಚಾ ಪುಸ್ತಕದಲ್ಲಿ ಹೆಚ್ಚಿಗೆ ಅದಿರು ಉತ್ಪಾದನೆ ಬಗ್ಗೆ ಬರೆದಿದ್ದು, ಅದನ್ನು ಆಧರಿಸಿ ಎಚ್‌ಡಿಕೆ ಆರೋಪ ಮಾಡಿದ್ದಾರೆಂದು ಹೇಳಿದರು.
ಪ್ರಸ್ತುತ ಎಚ್‌ಡಿಕೆ ಹೇಳಿರುವಂತೆ 1.80ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆ ಮಾಡಬೇಕಾದರೆ ಪ್ರತಿ 83 ಸೆಕೆಂಡ್‌ಗೆ ಒಂದರಂತೆ ಪ್ರತಿನಿತ್ಯ 2 ಸಾವಿರ ಟಿಪ್ಪರ್ ಲಾರಿಗಳು ಓಡಾಡಬೇಕು. ವಾಸ್ತವದಲ್ಲಿ ಅಷ್ಟೊಂದು ಯಂತ್ರೋಪಕರಣಗಳ ಸಾಮರ್ಥ್ಯವಿಲ್ಲ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಬಳಿಕ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ. ಯಾವುದೇ ಗಣಿ ಕಂಪೆನಿ ವ್ಯಾಪ್ತಿಯಿಂದ ಅದಿರನ್ನು ಸಾಗಾಟ ಮಾಡಲು ಸಾಧ್ಯವಿಲ್ಲ. ಅರಣ್ಯ, ಗಣಿ, ಆರ್‌ಟಿಓ ಮತ್ತು ವಾಣಿಜ್ಯ ತೆರಿಗೆ ಸೇರಿ ನಾಲ್ಕು ಚೆಕ್‌ಪೋಸ್ಟ್ ದಾಟಿ ಅದಿರನ್ನು ಸಾಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ವಿದೇಶಿ ಮರಳು-ಅನುಮತಿ: ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವ ಸಂಬಂಧ ಈಗಾಗಲೇ ಎಂಎಸ್‌ಐಎಲ್‌ಗೆ ಅನುಮತಿ ನೀಡಿದ್ದು, ಮರಳು ಆಮದು ಮಾಡಿಕೊಳ್ಳಲು ಏಳು ಅರ್ಜಿ ಸಲ್ಲಿಸಿದ್ದು, ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.







